Share this news

ನವದೆಹಲಿ: ದೇಶದಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗುತ್ತಿರುವ ಏಕರೂಪ ನಾಗರಿಕ ಸಂಹಿತೆ ವಿಚಾರದಲ್ಲಿ ಇದೀಗ ಸಮೀಕ್ಷೆಯೊಂದರಲ್ಲಿ ಅಚ್ಚರಿಯ ಹಾಗೂ ಸ್ಪೋಟಕ ಮಾಹಿತಿ ಹೊರಬಿದ್ದಿದೆ.

ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರದಲ್ಲಿ ಪರ ವಿರೋಧ ಚರ್ಚೆಗಳು ವ್ಯಾಪಕವಾಗಿ ನಡೆಯುತ್ತಿದ್ದು,ಈ ಕುರಿತಂತೆ ನ್ಯೂಸ್18 ನೆಟ್ ವರ್ಕ್ ಸುದ್ದಿವಾಹಿನಿ ಮೆಗಾ ಸರ್ವೇ ನಡೆಸಿದ್ದು ಇದರಲ್ಲಿ ಶೇ. 67ರಷ್ಟು ಮುಸ್ಲಿಂ ಮಹಿಳೆಯರು ಏಕರೂಪ ನಾಗರಿಕ ಸಂಹಿತೆಗೆ ಬೆಂಬಲ ಸೂಚಿಸಿದ್ದಾರೆ ಎಂದು ಹೇಳಿದೆ. ಆ ಮೂಲಕ ಕೇಂದ್ರ ಸರ್ಕಾರದ ಏಕರೂಪ ನಾಗರಿಕ ಸಂಹಿತೆ ಜಾರಿಗೆ ಹೆಚ್ಚಿನ ಬಲಸಿಕ್ಕಂತಾಗಿದೆ.


ದೇಶದ 25 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ 8035 ಮುಸ್ಲಿಂ ಮಹಿಳೆಯರಿಂದ ಏಕರೂಪ ನಾಗರಿಕ ಸಂಹಿತೆ ವಿಚಾರವಾಗಿ ಸರ್ವೇಗೆ ವಿವರ ಪಡೆಯಲಾಗಿತ್ತು. ಶೇ. 79ರಷ್ಟು ಮುಸ್ಲಿಂ ಮಹಿಳೆಯರು ಪುರುಷರಾಗಲಿ, ಮಹಿಳೆಯರಾಗಲಿ ಮದುವೆಯ ವಯಸ್ಸು 21 ಆಗಿರಬೇಕು ಎನ್ನುವ ವಿಚಾರದಲ್ಲಿ ಸಹಮತ ಹೊಂದಿದ್ದಾರೆ. ಮದುವೆ,ವಿಚ್ಛೇದನ ಹಾಗೂ ಉತ್ತರಾಧಿಕಾರಕ್ಕಾಗಿ ಹೆಚ್ಚಿನ ಮುಸ್ಲಿಂ ಮಹಿಳೆಯರು ಏಕರೂಪ ನಾಗರಿಕ ಸಂಹಿತೆಯನ್ನು ಬೆಂಬಲಿಸುವುದಾಗಿ ತಿಳಿಸಿದ್ದಾರೆ ಎಂದು ಸಮೀಕ್ಷೆ ಬಹಿರಂಗಪಡಿಸಿದೆ.


ಅAದಾಜು 8035 ಮಹಿಳೆಯರ ಪೈಕಿ, 5403 ಮಹಿಳೆಯರು ಮದುವೆ, ವಿಚ್ಛೇದನ, ಉತ್ತರಾಧಿಕಾರ ಹಾಗೂ ದತ್ತು ಸ್ವೀಕಾರದ ಕುರಿತು ಸಮಾನ ಕಾನೂನಿನ ಅಗತ್ಯವಿದೆ ಎಂದು ಹೇಳಿದ್ದಾರೆ. ಈ ಸಮೀಕ್ಷೆಯಲ್ಲಿ 18 ರಿಂದ 65 ವರ್ಷ ವಯಸ್ಸಿನ ಮುಸ್ಲಿಂ ಮಹಿಳೆಯರು ಭಾಗವಹಿಸಿದ್ದರು. ಮದುವೆ, ವಿಚ್ಛೇದನ, ದತ್ತು ಸ್ವೀಕಾರ ಮತ್ತು ಉತ್ತರಾಧಿಕಾರದಂಥ ವೈಯಕ್ತಿಕ ವಿಷಯಗಳಿಗಾಗಿ ಎಲ್ಲಾ ಭಾರತೀಯರಿಗೂ ಸಮಾನ ಕಾನೂನು ಇರಬೇಕು ಎನ್ನುವ ವಿಚಾರವನ್ನು ನೀವು ಬೆಂಬಲಿಸುತ್ತೀರಾ ಎಂದು ಸಮೀಕ್ಷೆಯಲ್ಲಿ ಕೇಳಿದ ಪ್ರಶ್ನೆಗೆ 5403 ಮಹಿಳೆಯರು ಹೌದು ಎಂದು ಹೇಳಿದ್ದರೆ, 2039 ಮಹಿಳೆಯರು ಇಲ್ಲ ಎಂದು ಹೇಳಿದ್ದಾರೆ.


ಇನ್ನು ಸ್ನಾತಕೋತ್ತರ ಪದವಿ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾಭ್ಯಾಸ ಮಾಡಿದ ಮಹಿಳೆಯರಲ್ಲಿ ಶೇ. 68 ಮಂದಿ ಅಂದರೆ 2076 ಮಹಿಳೆಯರು ಸಾಮಾನ್ಯ ಕಾನೂನನ್ನು ಬೆಂಬಲಿಸಿದ್ದಾರೆ. ಇನ್ನು ಪ್ರತಿಶತ 27ರಷ್ಟು ಜನರು (820) ಮಂದಿ ಇಲ್ಲ ಎಂದಿದ್ದಾರೆ. ಇನ್ನು ಶೇ.7.4ರಷ್ಟು ಮಂದಿ ತಮಗೆ ಗೊತ್ತಿಲ್ಲ ಅಥವಾ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.


ಇನ್ನು ವಯಸ್ಸಿನ ಪ್ರಕಾರವೂ ಸಮೀಕ್ಷೆಯನ್ನು ವಿವರಿಸಲಾಗಿದೆ. 18-44 ವರ್ಷ ವಯಸ್ಸಿನ 4366 (ಶೇ.69) ಏಕರೂಪ ನಾಗರಿಕ ಕಾನೂನು ಸಂಹಿತೆಯನ್ನು ಬೆಂಬಲಿಸಿದರೆ, ಶೇ. 24ರಷ್ಟು ಮಂದಿ ಬೆಂಬಲ ನೀಡಿಲ್ಲ. ಶೇ. 6 ರಷ್ಟು ಮಂದಿ ತಮಗೆ ಗೊತ್ತಿಲ್ಲ ಹಾಗೂ ಹೇಳಲು ಸಾಧ್ಯವಿಲ್ಲ ಎದು ಅಭಿಪ್ರಾಯಪಟ್ಟಿದ್ದಾರೆ. 44 ವರ್ಷಕ್ಕಿಂತ ಮೇಲಿನವರಲ್ಲಿ ಶೇ.60ರಷ್ಟು ಮಂದಿ ಕಾನೂನನ್ನು ಬೆಂಬಲಿಸಿದ್ದರೆ, ಶೇ.30ರಷ್ಟು ಮಂದಿ ಬೆಂಬಲ ನೀಡಿಲ್ಲ. ಶೇ.11 ರಷ್ಟು ಮಂದಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.


ಮದುವೆ, ವಿಚ್ಛೇದನ, ಉತ್ತರಾಧಿಕಾರ, ದತ್ತು ಸ್ವೀಕಾರ, ಕುಟುಂಬ ನಿರ್ವಹಣೆ, ಧಾರ್ಮಿಕತೆ ಸೇರಿದಂತೆ ಇತರ ವಿಷಯಗಳಲ್ಲಿ ಎಲ್ಲಾ ಸಮುದಾಯಗಳಿಗೆ ಒಂದೇ ಕಾನೂನು ಅನ್ವಯವಾಗುವ ನಿಟ್ಟಿನಲ್ಲಿ ಒಂದು ದೇಶ ಒಂದು ಕಾನೂನು ಎನ್ನುವುದು ಸಮಾನ ನಾಗರಿಕ ಸಂಹಿತೆಯ ಅರ್ಥವಾಗಿದೆ. “ಪ್ರತ್ಯೇಕ ಸಮುದಾಯಗಳಿಗೆ ಪ್ರತ್ಯೇಕ ಕಾನೂನು” ಎಂಬ ದ್ವಂದ್ವ ವ್ಯವಸ್ಥೆಯಲ್ಲಿ ದೇಶವು ನಡೆಯಲು ಸಾಧ್ಯವಿಲ್ಲದ ಹಿನ್ನಲೆಯಲ್ಲಿ ಭಾರತಕ್ಕೆ ಯುಸಿಸಿ ಅಗತ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.


ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆಯ ಕುರಿತು ಕೇಂದ್ರ ಚರ್ಚೆ ಮಾಡುವ ಸಾಧ್ಯತೆಯಿದೆ. ಆದರೆ ಈ ಕಾಯಿದೆ ಜಾರಿಗೆ ಕಾಂಗ್ರೆಸ್ ಸೇರಿದಂತೆ ಅದರ ಮಿತ್ರಪಕ್ಷಗಳು ತೀವೃ ವಿರೋಧ ವ್ಯಕ್ತಪಡಿಸುತ್ತಿವೆ.ಮುಂದಿನ ಅಧಿವೇಶನದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗುತ್ತದೆಯೇ ಎನ್ನುವುದನ್ನು ಕಾದು ನೋಡಬೇಕಿದೆ.

Leave a Reply

Your email address will not be published. Required fields are marked *