ಬೆಂಗಳೂರು :ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಮೊದಲ ಗ್ಯಾರಂಟಿಯಾಗಿ ಜಾರಿಗೊಳಿಸಿದ ಶಕ್ತಿ ಯೋಜನೆಯಿಂದ ಖಾಸಗಿ ಬಸ್ಗಳಿಗೆ ಭಾರಿ ಹಿನ್ನಡೆಯಾಗಿದೆ. ಆದ್ದರಿಂದ ಎಲ್ಲ ಖಾಸಗಿ ಬಸ್ಗಳನ್ನೂ ಕೂಡ ಶಕ್ತಿ ಯೋಜನೆ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಖಾಸಗಿ ಬಸ್ ಮಾಲೀಕರ ಫೆಡರೇಶನ್ ಅಧ್ಯಕ್ಷ ಸುರೇಶ್ ನಾಯ್ಕ್ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ ನಡೆಸ ಆಟೋ, ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್ ಹಾಗೂ ಖಾಸಗಿ ಬಸ್ ಮಾಲೀಕರೊಂದಿಗೆ ನಡೆದ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಖಾಸಗಿ ಬಸ್ ಮಾಲೀಕರ ಫೆಡರೇಷನ್ ಅಧ್ಯಕ್ಷ ಸುರೇಶ್ ನಾಯ್ಕ್ ಅವರು, ರಾಜ್ಯದಲ್ಲಿರುವ ಎಲ್ಲ ಖಾಸಗಿ ಬಸ್ಗಳಲ್ಲಿಯೂ ಶಕ್ತಿ ಯೋಜನೆಯನ್ನು ಜಾರಿಗೊಳಿಸಿ. ಇದರಿಂದ ಖಾಸಗಿ ಬಸ್ಗಳಿಗೆ ಉಂಟಾಗುವ ನಷ್ಟ ತಗ್ಗಲಿದೆ. ಎಲ್ಲ ಮಹಿಳೆಯರಿಗೂ ಶೀಘ್ರವಾಗಿ ಸ್ಮಾರ್ಟ್ ಕಾರ್ಡ್ ವಿತರಣೆ ಮಾಡಿ. ನಂತರ, ಸ್ಮಾರ್ಟ್ ಕಾರ್ಡ್ ತೋರಿಸಿದ ಮಹಿಳೆಯರಿಗೆ ನಾವು ಉಚಿತ ಪ್ರಯಾಣಕ್ಕೆ ಅನುಕೂಲ ಮಾಡಿಕೊಡುತ್ತೇವೆ. ಅವರ ಪ್ರಯಾಣದ ವೆಚ್ಚವನ್ನು ನಂತರ ಸರ್ಕಾರ ಭರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಗೊಳಿಸಿದ ನಂತರ ಖಾಸಗಿ ಮಾಲೀಕತ್ವದ ಸಾರ್ವಜನಿಕ ಸಾರಿಗೆ ಬಸ್ಗಳಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟಾಗುತ್ತಿದೆ. ಹೀಗಾಗಿ ಶಕ್ತಿ ಯೋಜನೆಯನ್ನು ಖಾಸಗಿ ಬಸ್ ಗಳಿಗೆ ವಿಸ್ತರಣೆ ಮಾಡುವಂತೆ ಸಭೆಯಲ್ಲಿ ಆಗ್ರಹ ಮಾಡಲಾಗಿದೆ. ಕರಾವಳಿ ಸೇರಿದಂತೆ ಹಲವಡೆ ಸರ್ಕಾರಿ ಬಸ್ ಸೇವೆ ಇರಲ್ಲ. ಹೀಗಾಗಿ ಖಾಸಗಿ ಬಸ್ ಗಳಿಗೆ ಇದನ್ನು ವಿಸ್ತಸಲು ಒತ್ತಾಯ ಮಾಡಿದ್ದೇವೆ. ಇಲ್ಲದಿದ್ದರೆ ಒಂದು ವರ್ಷದಲ್ಲಿ ಖಾಸಗಿ ಬಸ್ ಗಳನ್ನು ಮುಚ್ಚಬೇಕಾಗುತ್ತದೆ. ಶಕ್ತಿ ಯೋಜನೆಗೆ ಖಾಸಗಿ ಬಸ್ ಗಳನ್ನು ಒಳಪಡಿಸುವಂತೆ ಆಗ್ರಹ ಮಾಡಲಾಗಿದೆ ಎಂದು ತಿಳಿಸಿದರು.