ಕಾರ್ಕಳ : ಮಣಿಪುರದಲ್ಲಿ ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಜನಾಂಗೀಯ ಸಂಘರ್ಷವನ್ನು ನಿಯಂತ್ರಣ ತರುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ.ಮಣಿಪುರದಲ್ಲಿ ಮಹಿಳೆಯರನ್ನು ಬೆತ್ತಲೆಗೊಳಿಸಿ ಅತ್ಯಾಚಾರ ನಡೆಸಿರುವ ಹೇಯಕೃತ್ಯದಿಂದಾಗಿ ನಮ್ಮ ದೇಶ ವಿಶ್ವದ ಎದುರು ದೇಶ ತಲೆ ತಗ್ಗಿಸುವಂತಾಗಿದೆ. ಈ ಘಟನೆಗೆ ಪ್ರಧಾನಿ ಮೋದಿ ಮತ್ತು ಮಣಿಪುರದ ರಾಜ್ಯ ಸರ್ಕಾರವೇ ಹೊಣೆಯಾಗಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರಪಾಲ್ ನಕ್ರೆ ಆರೋಪಿಸಿದ್ದಾರೆ.
ಮಣಿಪುರದಲ್ಲಿ ನಡೆಯುತ್ತಿರುವ ಗಲಭೆ ಹಾಗೂ ಮಹಿಳೆಯರ ಮೇಲಿನ ಅತ್ಯಾಚಾರ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ವತಿಯಿಂದ ಶನಿವಾರ ಕಾರ್ಕಳ ಬಸ್ ನಿಲ್ದಾಣದಲ್ಲಿ ನಡೆದ ಬೃಹತ್ ಪ್ರತಿಭಟನೆ ಸಭೆಯಲ್ಲಿ ಬಿಪಿನ್ ಚಂದ್ರ ಪಾಲ್ ಮಾತನಾಡಿ,ಕೇಂದ್ರ ಸರಕಾರ ಇಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಕ್ಕೆ ತನ್ನ ರಾಜಕೀಯದ ಗುಪ್ತ ಕಾರ್ಯಸೂಚಿಯಡಿಯಲ್ಲಿ ಕೋಮು ಸಂರ್ಘದ ಲೇಪನ ಹಚ್ಚಿ ಜನರ ದಿಕ್ಕು ತಪ್ಪಿಸಲು ನೋಡಿ ತನ್ನ ಬುಡಕ್ಕೆ ತಾನೇ ಕಿಡಿ ಹಚ್ಚಿಕೊಂಡಿದೆ. ಮಣಿಪುರದ ಗಲಭೆಯಲ್ಲಿ ಸಾವಿರಾರು ಜನರು ಸಾವನ್ನಪ್ಪಿದ್ದು,ಅಮಾಯಕ ಮಹಿಳೆಯರ ಮೇಲೆ ಅತ್ಯಾಚಾರ ನಡೆಯುತ್ತಲೇ ಇದೆ,ಆದರೂ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮಾತನಾಡುತ್ತಿಲ್ಲ,ಈ ಘಟನೆಯಿಂದ ಬಿಜೆಪಿ ವಿರುದ್ಧ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ.ಮಹಿಳೆಯರ ಬಗ್ಗೆ ಭಾಷಣ ಮಾಡುವ ಪ್ರಧಾನಿಗೆ ಮಹಿಳೆಯರ ಮೇಲೆ ಗೌರವವಿಲ್ಲವೆನ್ನುವುದು ಈ ಘಟನೆಯಿಂದ ಸಾಬೀತಾಗಿದೆ ಎಂದು ಬಿಪಿನ್ ಚಂದ್ರಪಾಲ್ ಆರೋಪಿಸಿದರು.
ನ್ಯಾಯವಾದಿ ಶೇಖರ ಮಡಿವಾಳ ಮಾತನಾಡಿ, ಮಣಿಪುರ ಗಲಭೆ ಮರೆಮಾಚಲು ಉಡುಪಿಯ ಸುಳ್ಳು ಘಟನೆಯನ್ನು ವೈಭವೀಕರಿಸಲು ಯತ್ನಿಸಿ ಬಿಜೆಪಿ ವಿಫಲವಾಗಿದೆ,ಆ ಮೂಲಕ ಕೋಮುದಳ್ಳುರಿ ಹಬ್ಬಿಸುವ ಯತ್ನ ವಿಫಲವಾಗಿದೆ ಎಂದರು.
ಜಗತ್ತಿನಲ್ಲಿ ವಿಶ್ವಗುರು ಎಂಬ ಹೆಸರಿನ್ನಿಟ್ಟುಕೊಂಡಿರುವ ಮೋದಿಯವರಿಗೆ ಮಿಲಿಟರಿ ಶಕ್ತಿ ಕಳುಹಿಸಿ ಮಣಿಪುರ ಗಲಭೆಯನ್ನು ನಿಯಂತ್ರಿಸಲು ಯಾಕೆ ಸಾಧ್ಯವಿಲ್ಲ. ಅವರಿಗೆ ಸಮಾಜದಲ್ಲಿ ಸಂಘರ್ಷ ನಡೆಯಬೇಕು, ಧರ್ಮಗಳ ನಡುವೆ ಯುದ್ದ ನಡೆಯಬೇಕು ಹಾಗಾದಲ್ಲಿ ಮಾತ್ರ ಬಿಜೆಪಿ ಅಧಿಕಾರಕ್ಕೆ ಬರಲು ಸಾಧ್ಯ ಎನ್ನುವ ಮನೋಭಾವದಿಂದ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದರು.
ಬೇಟಿ ಬಚಾವೋ, ಬೇಟಿಪಡಾವೋ ಎಂಬ ಧ್ಯೇಯವಾಕ್ಯ ಪಾಲನೆಗೆ ಪ್ರಧಾನಿ ಮೋದಿ ವಿಫಲರಾಗಿದ್ದು ಇಂದು ಅತ್ಯಾಚಾರಿಗಳನ್ನು ರಕ್ಷಿಸಲು ಹೊರಟಿದ್ದಾರೆ ಎಂದು ತೀಕ್ಷ್ಣವಾಗಿ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್ ಮುಖಂಡ ನೀರೆ ಕೃಷ್ಣ ಶೆಟ್ಟಿ ಮಾತನಾಡಿ, ಸಂಸಾರ ಹೊಣೆಗಾರಿಕೆ ಇಲ್ಲದ ಪ್ರಧಾನಿ ಮೋದಿಯವರಿಗೆ ಮಹಿಳೆಯರ ಸಂಕಷ್ಟ ಅರಿತುಕೊಳ್ಳಲು ಹೇಗೆ ಸಾಧ್ಯ,ಇಂತಹವರಿಂದ ಮಹಿಳೆಯರ ರಕ್ಷಣೆ ಸಾಧ್ಯವೇ ಎಂದು ಪ್ರಶ್ನಿಸಿದರು.
ಮಣಿಪುರದಲ್ಲಿ ರಾಜ್ಯವೇ ಹೊತ್ತಿ ಉರಿದರೂ ಪ್ರಧಾನಿಯವರು ಮುಖ್ಯಮಂತ್ರಿಯವರ ರಾಜೀನಾಮೆ ಯಾಕೆ ಪಡೆದಿಲ್ಲ.ಮಣಿಪುರ ಗಲಭೆಯಿಂದ ವಿದೇಶದಲ್ಲಿ ಭಾರತದ ಮಾನ ಹರಾಜು ಆಗುತ್ತಿದ್ದರೂ ಕೇಂದ್ರ ಸರ್ಕಾರ ಮಾತ್ರ ಯಾವುದೇ ಕ್ರಮಕ್ಕೆ ಮುಂದಾಗದೇ ಇರುವುದು ದುರಂತ,ಆದ್ದರಿಂದ ಈ ಘಟನೆಯ ನೈತಿಕ ಹೊಣೆ ಹೊತ್ತು ಪ್ರಧಾನ ಮಂತ್ರಿ ರಾಜೀನಾಮೆ ಬಿಡಬೇಕೆಂದು ಅವರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ,ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಬಾಯರಿ, ಸಮ ಸುರೇಂದ್ರ ಶೆಟ್ಟಿ ಕಾರ್ಕಳ, ಇಂಟಕ್ ಜಿಲ್ಲಾಧ್ಯಕ್ಷ ಕಾಬೆಟ್ಟು ಕಿರಣ್ ಹೆಗ್ಡೆ, ಯುವ ಕಾಂಗ್ರೆಸ್ ಮುಖಂಡ ಮಧುರಾಜ್ ಶೆಟ್ಟಿ, ಅಲ್ಪ ಸಂಖ್ಯಾತ ಘಟಕದ ಮುಖಂಡ ಅಸ್ಲಾಂ, ಸುಭೀತ್ ಎನ್.ಆರ್, ಪ್ರಭಾಕರ ಬಂಗೇರಾ,ಅಣ್ಣಪ್ಪ ನಕ್ರೆ, ದಯಾನಂದ ಬಂಗೇರಾ, ನಲ್ಲೂರು ಉದಯಕುಮಾರ್ ಜೈನ್, ದಿವಾಕರ ನಿಟ್ಟೆ, ಸುಪ್ರೀತ್ ಶೆಟ್ಟಿ, ಕುಶ ಮೂಲ್ಯ, ಆರೀಫ್ ಕಲ್ಲೊಟ್ಟೆ,ಸುಧಾಕರ ಶೆಟ್ಟಿ, ನವೀನ್ ದೇವಾಡಿಗ, ವಿವೇಕಾನಂದ ಶೆಣೈ, ವಿನ್ನಿ ಬೋಲ್ಡ್ ಮೆಂಡೋನ್ಸಾ, ಸೋಮನಾಥ ನಾಯಕ್, ಶಿವಾಜಿ ರಾವ್, ಸತೀಶ್ ದೇವಾಡಿಗ,ಮಹಿಳಾ ಕಾಂಗ್ರೆಸ್ ಘಟಕದ ಮುಖ್ಯಸ್ಥೆ ಅನಿತಾ ಡಿ’ಸೋಜಾ,ನಳಿನಿ ಶೆಟ್ಟಿ, ನಳಿನಿ ಆಚಾರ್ಯ, ಪ್ರತಿಮಾ ರಾಣೆ, ಶೋಭಾ,ಶಾಂತಿ ಶೆಟ್ಟಿ,ಕಾಂತಿ ಶೆಟ್ಟಿ, ಮೊದಲಾದವರು ಉಪಸ್ಥಿತರಿದ್ದರು.
ಕಾರ್ಕಳ ಕಾಂಗ್ರೆಸ್ ವಕ್ತಾರ ಶುಭದ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು