Share this news

ಮೂಡಬಿದಿರೆ: ಸಶಕ್ತ ಭಾರತದ ಆಶಾಕಿರಣವಾದ ಯುವಜನತೆ ಮಾದಕ ವಸ್ತು ಸೇವನೆಯ ಚಟಕ್ಕೆ ಬಲಿಬಿದ್ದು ತಮ್ಮ ಬದುಕನ್ನು ನಾಶ ಮಾಡಿಕೊಳ್ಳುವ ಬದಲು ನಿಸ್ವಾರ್ಥ ಚಿಂತನೆಯ ಸ್ವಸ್ಥ ಸಮಾಜವನ್ನು ರೂಪಿಸಿ ದೇಶದ ಅಭಿವೃದ್ಧಿಗೆ ಪೂರಕವಾಗಬೇಕು. ಯುವಕ-ಯುವತಿಯರು ದುಶ್ಚಟಗಳಿಗೆ ಬಲಿಯಾಗದೇ ಸುಂದರ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಮೂಡುಬಿದಿರೆ ಪೋಲಿಸ್ ವೃತ್ತ ನಿರೀಕ್ಷಕರಾದ ನಿರಂಜನ್ ಕುಮಾರ್ ತಿಳಿಸಿದರು.

ಅವರು ಮೂಡುಬಿದಿರೆಯ ಎಕ್ಸಲೆಂಟ್ ಪದವಿಪೂರ್ವ ಕಾಲೇಜಿನಲ್ಲಿ ಎನ್.ಎಸ್.ಎಸ್ ಘಟಕದ ಆಶ್ರಯದಲ್ಲಿ ನಡೆದ ಮಾದಕ ವಸ್ತು ವ್ಯಸನ ಮುಕ್ತ ಸಮಾಜ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳ ಕನಸು ಮತ್ತು ಸಾಧನೆಗಳಿಗೆ ಪ್ರತಿಕೂಲವಾಗಿರುವ ದುರ್ವ್ಯಸನಗಳಿಂದ ಹೆತ್ತವರು ಆತಂಕಕ್ಕೊಳಗಾಗುತ್ತಿದ್ದಾರೆ. ಹದಿಹರೆಯದಲ್ಲಿ ಆಕರ್ಷಣೆಗಳಿಗೆ ಮರುಳಾಗದೇ ತಮ್ಮ ಹೊಣೆಗಾರಿಕೆಯನ್ನು ಅರಿತು ಅಧ್ಯಯನದ ಕಡೆಗೆ ಮನಸ್ಸನ್ನು ಕೇಂದ್ರೀಕರಿಸಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಮಾದಕ ವಸ್ತುಗಳ ಸೇವನೆ ವ್ಯಕ್ತಿಯ ಸೃಜನಶೀಲತೆಯನ್ನು ದಮನಗೊಳಿಸಿ ಅವರನ್ನು ವ್ಯಕ್ತಿತ್ವದಲ್ಲಿ ಕುಬ್ಜರನ್ನಾಗಿಸಿ ಬದುಕನ್ನು ಬರಡಾಗಿಸುತ್ತದೆ ಎಂದು ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಿದರು.
ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿ ತೇಜಸ್ವೀ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *