ಬೆಂಗಳೂರು:ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳಲ್ಲಿನ ಖಾಲಿ ಹುದ್ದೆಗಳಿಗೆ ಅನುಕಂಪದ ಆಧಾರದಲ್ಲಿ ನಡೆಯುವ ನೇಮಕಾತಿಗಳಿಗೆ ಸರ್ಕಾರ ಮುಂದಿನ ಆದೇಶದವರೆಗೆ ತಾತ್ಕಾಲಿಕ ತಡೆ ನೀಡಿದ್ದು,ಇದರಿಂದ ನೌಕರಿ ಸಿಗುತ್ತದೆ ಎನ್ನುವ ನಿರೀಕ್ಷೆಯಿಟ್ಟುಕೊಂಡವರಿಗೆ ಸರ್ಕಾರದ ಈ ಅದೇಶ ಬಿಗ್ ಶಾಕ್ ನೀಡಿದೆ.
ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಬಾಲಪ್ಪ ರಾಜ್ಯದ ಎಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪತ್ರ ಬರೆದಿದ್ದು, ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕಛೇರಿಗಳಲ್ಲಿ ನೇರ ನೇಮಕಾತಿ ಕೋಟಾದಡಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರೂಪ್-ಸಿ ಹುದ್ದೆಗಳು ಖಾಲಿ ಇರುವುದನ್ನು ಗಮನಿಸಿ, ಸದರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಇನ್ನೂ ಹೆಚ್ಚಿನ ಕಾಲಾವಕಾಶ ಬೇಕಾಗಿರುವ ಹಿನ್ನೆಲೆಯಲ್ಲಿ ಎಲ್ಲಾ ಪ್ರಾದೇಶಿಕ ಆಯುಕ್ತರ ಕಛೇರಿಗಳಿಗೆ ಉಲ್ಲೇಖ-1 ರಲ್ಲಿ, ಪತ್ರ ಬರೆದು ತಮ್ಮ ಕಛೇರಿಗಳಲ್ಲಿ ಅನುಕಂಪದ ನೇಮಕಾತಿ ಕುರಿತು ಬಾಕಿ ಇರುವ ಹಾಗೂ ಬಾಕಿ ಇರುವ ಪ್ರಸ್ತಾವನೆಗಳ ಪೈಕಿ ಪ್ರಥಮ ದರ್ಜೆ ಸಹಾಯಕ, ಶೀಘ್ರಲಿಪಿಗಾರರು ಮತ್ತು ದ್ವಿತೀಯ ದರ್ಜೆ ಸಹಾಯಕ ಹುದ್ದೆಗಳಿಗೆ ಅನುಕಂಪದ ನೇಮಕಾತಿ ಪ್ರಸ್ತಾವನೆಗಳನ್ನು ಜಿಲ್ಲಾ ಪಂಚಾಯತ್‌ಗಳಲ್ಲಿ, ನೇರ ನೇಮಕಾತಿ ಕೋಟಾದಡಿ ಖಾಲಿ ಇರುವ ಹುದ್ದೆಗಳ ಎದುರು ನೇಮಕ ಮಾಡಲು ಅನುವಾಗುವಂತೆ ನೌಕರರ ಇಚ್ಛೆಗನುಗುಣವಾಗಿ ಸಂಬಂಧಿಸಿದ ಜಿಲ್ಲಾ ಪಂಚಾಯತ್‌ಗಳಿಗೆ ಕಳುಹಿಸುವಂತೆ ಈ ಹಿಂದಿನ ಆದೇಶದಲ್ಲಿ ತಿಳಿಸಲಾಗಿತ್ತು ಎಂದಿದ್ದಾರೆ.
ಉಲ್ಲೇಖ(1) ರ ಪತ್ರವನ್ನು ಉಲೆಖ(2) ರ ಪತ್ರದೊಂದಿಗೆ ಲಗತ್ತಿಸಿ, ಎಲ್ಲಾ ಜಿಲ್ಲಾ ಪಂಚಾಯತ್ ಗಳಿಗೆ ಬರೆದ ಪತ್ರದಲ್ಲಿ, ಅನುಕಂಪದ ನೇಮಕಾತಿ ಕುರಿತು, ಪ್ರಾದೇಶಿಕ ಆಯುಕ್ತರ ಕಛೇರಿಯಿಂದ ಪ್ರಸ್ತಾವನೆ ಸ್ವೀಕೃತವಾದಲ್ಲಿ ಅಂತಹ ಪ್ರಸ್ತಾವನೆಗಳನ್ನು ಅನುಕಂಪದ ನೇಮಕಾತಿ ನಿಯಮಗಳ ಅನುಸಾರ ವಿವರವಾಗಿ ಪರಿಶೀಲಿಸಿ, ಅನುಕಂಪದ ನೇಮಕಾತಿಗೆ ಅರ್ಹವೆಂದು ಕಂಡು ಬರುವ ಆಭ್ಯರ್ಥಿಗಳನ್ನು ನೇರ ನೇಮಕಾತಿ ಕೋಟಾದಡಿ ಖಾಲಿ ಇರುವ ಹುದ್ದೆಯ ಎದುರು ಪರಿಗಣಿಸಿ, ಅಂತಹ ಅಭ್ಯರ್ಥಿಯನ್ನು ನೇಮಕ ಮಾಡಲು ಕ್ರಮವಹಿಸಬಹುದೆಂದು ತಿಳಿಸಲಾಗಿತ್ತು ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.
ಇತ್ತೀಚಿನ ಬೆಳವಣಿಗೆಯ ಪ್ರಕಾರ ಪ್ರಾದೇಶಿಕ ಆಯುಕ್ತರ ಕಛೇರಿಗಳಿಂದ ಸ್ವೀಕೃತವಾಗುವ ಅನುಕಂಪದ ನೇಮಕಾತಿ ಪ್ರಸ್ತಾವನೆಗಳನ್ನು ಆಧರಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲಾ ಪಂಚಾಯತ್‌ಗಳು ಅನುಕಂಪದ ಆಧಾರದ ಮೇಲೆ ನೇಮಕಾತಿ ಆದೇಶ ನೀಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿರುತ್ತದೆ. ಹೀಗೆ ಮುಂದುವರಿದಲ್ಲಿ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಕಛೇರಿಗಳಲ್ಲಿ ನೇರ-ನೇಮಕಾತಿ ಮೋಟಾದಡಿ ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಅನುಕಂಪದ ಆಧಾರದ ಮೇಲೆಯೇ ಭರ್ತಿ ಮಾಡಬಹುದಾದ ಸಂದರ್ಭ ಉಂಟಾಗುತ್ತದೆ.ಇದರಿಂದ ತಾಲೂಕು ಹಾಗೂ ಜಿಲ್ಲಾ ಪಂಚಾಯತ್ ಕಛೇರಿಗಳ ಕಾರ್ಯನಿರ್ವಹಣೆಯ ಗುಣಮಟ್ಟ ಕುಸಿಯುವ ಸಾಧ್ಯತೆಯಿದ್ದು ಮಾತ್ರವಲ್ಲದೇ ತಾಲೂಕು ಹಾಗೂ ಜಿಲ್ಲಾ ಪಂಚಾಯತ್‌ಗಳಲ್ಲಿ ಕಾರ್ಯನಿರ್ವಹಿಸುವ ಸಂದರ್ಭದಲ್ಲಿ ಮರಣ ಹೊಂದುವ ನೌಕರರ ಕುಟುಂಬದ ಸದಸ್ಯರಿಗೆ ನೇಮಕಾತಿ ನೀಡಲು ಹುದ್ದೆಗಳು ಲಭ್ಯವಾಗದ ಸನ್ನಿವೇಶ ನಿರ್ಮಾಣವಾಗುತ್ತದೆ ಎಂದು ಹೇಳಿದ್ದಾರೆ.
ಅಂಶಗಳನ್ನು ಗಮನಿಸಿ, ಪ್ರಾದೇಶಿಕ ಆಯುಕ್ತರ ಕಛೇರಿಯಿಂದ ಸ್ವೀಕೃತವಾಗುವ ಪ್ರಸ್ತಾವನೆಗಳನ್ನು ಆಧರಿಸಿ ಮಾಡುವ ಅನುಕಂಪದ ನೇಮಕಾತಿಯನ್ನು ಒಂದು ನಿರ್ದಿಷ್ಟ ಪ್ರಮಾಣಕ್ಕೆ ಸೀಮಿತಗೊಳಿಸುವುದು ಅಗತ್ಯವೆಂದು ನಿರ್ಣಯಿಸಿ, ಈ ಸಂಬಂಧದ ಪ್ರಸ್ತಾವನೆಯು ಪರಿಶೀಲನೆಯಲ್ಲಿರುತ್ತದೆ. ಆದ್ದರಿಂದ ಈ ವಿಷಯದ ಕುರಿತು ಸರ್ಕಾರದಿಂದ ಮುಂದಿನ ನಿರ್ದೇಶನ ನೀಡುವವರೆಗೆ ಪ್ರಾದೇಶಿಕ ಆಯುಕ್ತರ ಮುಖಾಂತರ ಸ್ವೀಕೃತವಾಗಿರುವ ಹಾಗೂ ಸ್ವೀಕೃತವಾಗುವ ಅನುಕಂಪದ ನೇಮಕಾತಿ ಪ್ರಸ್ತಾವನೆಗಳ ಕುರಿತು ಯಾವುದೇ ಕ್ರಮ ವಹಿಸದಂತೆ ಹಾಗೂ ಈಗಾಗಲೇ ಪರಿಶೀಲನೆಯಲಿರುವ ಪ್ರಸ್ತಾವನೆಗಳನ್ನು ಯಾವ ಹಂತದಲ್ಲಿ, ಇದೆಯೋ ಅದೇ ಹಂತದಲ್ಲಿ ಬಾಕಿ ಇರಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ಇದರಿಂದ ಅನುಕಂಪದ ಆಧಾರದಲ್ಲಿ ನೇಮಕಾತಿ ನಿರೀಕ್ಷೆಯಿದ್ದವರಿಗೆ ನಿರಾಶೆಯಾಗಿದೆ.