ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಉಚಿತ ಗ್ಯಾರಂಟಿಗಳು, ಕಮಿಷನ್ ಆರೋಪ ಸೇರಿದಂತೆ ಹಲವು ವಿಚಾರಗಳ ಬಗ್ಗೆ ತೀವ್ರ ವಾಗ್ದಾಳಿ ನಡೆಸುತ್ತಿರುವ ಪ್ರತಿಪಕ್ಷ ಬಿಜೆಪಿ ಇದೀಗ, ವಿವಿಧ ಇಲಾಖೆಗಳ ನೌಕರರಿಗೆ ವೇತನ ಬಿಡುಗಡೆಯಾಗದಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದೆ. ಸರಣಿ ಟ್ವೀಟ್ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿರುವ ಬಿಜೆಪಿ, ನೌಕರರ ಸಂಬಳಕ್ಕಿಲ್ಲ ಗ್ಯಾರಂಟಿ, ಇದು ಉಚಿತ, ಖಚಿತ, ನಿಶ್ಚಿತ ಎಂದು ವ್ಯಂಗ್ಯವಾಡಿದೆ.

ಬಿಎಂಟಿಸಿ ನೌಕರರಿಗೆ ತಿಂಗಳು ಮುಗಿದು ಎರಡು ವಾರಗಳಾದರೂ ಸಂಬಳ ಕೈ ಸೇರಿಲ್ಲ! ಕೆಎಸ್ಆರ್ಟಿಸಿ ನೌಕರರು ಸಂಬಳವಿಲ್ಲದೆ ಡಿಪೋ ಬಿಟ್ಟು ಮನೆಗೆ ಹೋಗುತ್ತಿಲ್ಲ. 3 ತಿಂಗಳು ಕಳೆದರೂ ಅತಿಥಿ ಉಪನ್ಯಾಸಕರು ಸಂಬಳವನ್ನೇ ಕಂಡಿಲ್ಲ. ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೂ ಸಂಬಳ ಸಿಕ್ಕಿಲ್ಲ. ಶಾಲಾ ಶಿಕ್ಷಕರಿಗೂ ತಿಂಗಳಾದರೂ ಖಾತೆಗೆ ಸಂಬಳ ಜಮೆ ಆಗಿಲ್ಲ. ಗುತ್ತಿಗೆ ಆಧಾರದ ಸರ್ಕಾರಿ ನೌಕರರಿಗೆ ಕೂಡ ಸಂಬಳ ತಲುಪಿಲ್ಲ. ಇನ್ನೂ ಹಲವು ಇಲಾಖೆಗಳ ಸರ್ಕಾರಿ ನೌಕರರು ಸಂಬಳ ಸಿಗದೆ ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ರಾಜ್ಯದ ಜನರ ಕಿವಿ ಮೇಲೆ ಹೂ ಇಟ್ಟ ಸಿದ್ದರಾಮಯ್ಯ ಅವರ ಸರ್ಕಾರ ಗ್ಯಾರಂಟಿಯ ಹಣ ಕೊಡುವುದು ಹಾಗಿರಲಿ, ಮೊದಲು ನೌಕರರ ಸಂಬಳವನ್ನು ಜಾರಿಗೊಳಿಸಿ ಸ್ವಾಮಿ ಎಂದು ಬಿಜೆಪಿ ಟ್ವೀಟ್ನಲ್ಲಿ ಉಲ್ಲೇಖಿಸಿದೆ.

ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲ ಎನ್ನುವಂತಹ ಸ್ಥಿತಿ ಕರ್ನಾಟಕ ಕಾಂಗ್ರೆಸ್ ಶಾಸಕರದ್ದಾಗಿದೆ. ಒಂದು ಕಡೆ ಸಚಿವರು ಶಾಸಕರ ಎದುರು ಧಿಮಾಕು ದೌಲತ್ತು ತೋರಿಸುತ್ತಿದ್ದಾರೆ. ಇನ್ನೊಂದು ಕಡೆ ಡಿಸಿಎಂ ಡಿಕೆ ಶಿವಕುಮಾರ್ ಅವರ ದುರಹಂಕಾರಕ್ಕೆ ಬೆಂಗಳೂರಿನ ಶಾಸಕರು ತಲೆ ಚಚ್ಚಿಕೊಳ್ಳುವಂತಾಗಿದೆ. ಶಾಸಕರು ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು ಅನುದಾನ ಬಿಡುಗಡೆಗೆ ಒತ್ತಾಯಿಸಿದ್ರೂ, ಡಿಕೆ ಶಿವಕುಮಾರ್ ಅವರು ಕ್ಯಾರೇ ಎನ್ನುತ್ತಿಲ್ಲ. ಸಿಎಂ, ಡಿಸಿಎಂ ಕಿತ್ತಾಟದಲ್ಲಿ ಕಾಂಗ್ರೆಸ್ ಶಾಸಕರು ಅಂತೂ ಅನಾಥರಾಗಿದ್ದಾರೆ ಎಂದು ವ್ಯಂಗ್ಯವಾಡಿದೆ.

