ಕಾರ್ಕಳ: ತಾಲೂಕಿನ ಇನ್ನಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಎರಡು ಪ್ರಮುಖ ಯೋಜನೆಗಳ ಲೋಕಾರ್ಪಣೆಯ ಕಾರ್ಯಕ್ರಮವು ಸ್ವಾತಂತ್ರ್ಯದ ದಿನದಂದು ಗೋಪಾಲ್ ಭಂಡಾರಿ ಸಭಾಂಗಣದಲ್ಲಿ ನಡೆಯಿತು.
(NRLM) MGNREG ಯೋಜನೆಯಡಿ ಅಂದಾಜು ವೆಚ್ಚ ರೂ. 7*50 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಜೀವನೋಪಾಯ ಶಕ್ತಿ ಸಂಜೀವಿನಿ ಒಕ್ಕೂಟದ ಕಟ್ಟಡ ಹಾಗೂ ಸುಮಾರು 5,19,000 ರೂ. ವೆಚ್ಚದಲ್ಲಿ ಇನ್ನಾ ಗ್ರಾಮ ಪಂಚಾಯತ್ ಕಟ್ಟಡಕ್ಕೆ ಸೋಲಾರ್ ವಿದ್ಯುತ್ ಸಂಪರ್ಕ ಘಟಕವನ್ನು ಇನ್ನಾ ಗ್ರಾಮ ಪಂಚಾಯತ್ ಅಧ್ಯಕ್ಷ ಕುಶ ಆರ್ ಮೂಲ್ಯ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಗ್ರಾಮಾಭಿವೃದ್ದಿಯಲ್ಲಿ ಮಹಿಳೆಯರ ಸಹಭಾಗಿತ್ವ ಅತೀ ಅಗತ್ಯವಾಗಿದೆ. ಶಕ್ತಿ ಸಂಜೀವಿನಿ ಒಕ್ಕೂಟದ ಸದಸ್ಯರು ಸ್ವಾವಲಂಬಿ ಜೀವನ ನಡೆಸಲು ಹಾಗೂ ಸಾರ್ವಜನಿಕರಿಗೆ ಯೋಜನೆಯು ಖಂಡಿತ ಸಹಕಾರಿಯಾಗುತ್ತದೆ ಎಂದರು.
ಇನ್ನಾ ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ರಾಜೇಂದ್ರ ಭಟ್ ಕೆ ಮಾತನಾಡಿ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆಯನ್ನು ವಿವರಿಸಿದರು.
ಉಡುಪಿಯ ನ್ಯಾಯವಾದಿ ಸುನೀಲ್ ಎಸ್ ಕಾನೂನು ಮಾಹಿತಿ ನೀಡಿದರು.
ಇನ್ನಾ ಗ್ರಾಮದ ವ್ಯಾಪ್ತಿಯ ವಿವಿಧ ಶಾಲೆಗಳ ಮಕ್ಕಳಿಗೆ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಣೆ ಮಾಡಲಾಯಿತು.
ತಾ. ಪಂ ಮಾಜಿ ಸದಸ್ಯ ಜಯ ಎಸ್ ಕೋಟ್ಯಾನ್, ಮಾಜಿ ಅಧ್ಯಕ್ಷೆ ಸುಲೋಚನಾ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು.
ಶಕ್ತಿ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಪ್ರತಿಮಾ, ಪಂಚಾಯತ್ ಉಪಾಧ್ಯಕ್ಷೆ ಸರಿತಾ ಶೆಟ್ಟಿ, ಪಂಚಾಯತ್ ಸದಸ್ಯರಾದ ಶರ್ಮಿಳಾ, ವಿಮಲಾ, ಕಸ್ತೂರಿ, ಸುಜಾತ, ಗಿರಿಯಪ್ಪ ಪಂಚಾಯತ್ ಕಾರ್ಯದರ್ಶಿ ರಮೇಶ್ ಉಪಸ್ಥಿತರಿದ್ದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಆಶಾಲತಾ ಸ್ವಾಗತಿಸಿ, ಸದಸ್ಯರಾದ ಚಂದ್ರಹಾಸ ಶೆಟ್ಟಿ ವಂದಿಸಿದರು.







