ಮೂಡಬಿದಿರೆ: ಮೂಡಬಿದಿರೆ ತಾಲೂಕಿನ ಪುತ್ತಿಗೆ, ಪಾಲಡ್ಕ ಹಾಗೂ ಪಡುಮಾರ್ನಾಡು ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆದಿದೆ.
ಈ ಪೈಕಿ ಪಡುಮಾರ್ನಾಡು ಪಂಚಾಯಿತಿಯ ಒಟ್ಟು 18 ಸದಸ್ಯಬಲದ ಪೈಕಿ 10 ಬಿಜೆಪಿ ಹಾಗೂ 8 ಮಂದಿ ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಸ್ಪರ್ಧಿಸಿದ್ದರು, ಆದರೆ ನಿರೀಕ್ಷೆಯಂತೆ ಬಿಜೆಪಿ ಬೆಂಬಲಿತ ವಾಸುದೇವ ಭಟ್ 10 ಮತಗಳನ್ನು ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರೆ, ಉಪಾಧ್ಯಕ್ಷರಾಗಿ ಬಿಜೆಪಿ ಬೆಂಬಲಿತೆ ಸಂಪಾ ಆಯ್ಕೆಯಾಗಿದ್ದಾರೆ
ಇತ್ತ ಪುತ್ತಿಗೆ ಗ್ರಾಮ ಪಂಚಾಯಿತಿಯಲ್ಲಿ ವಿಭಿನ್ನ ಫಲಿತಾಂಶ ಬಂದಿದ್ದು ಸಿಪಿಎಮ್ ಬೆಂಬಲಿತ ಪಂಚಾಯತ್ ಸದಸ್ಯೆ ರಾಧಾ ಕಾಂಗ್ರೆಸ್ ಹಾಗೂ ಎಸ್.ಡಿ.ಪಿ.ಐ ಬೆಂಬಲಿತ ಸದಸ್ಯರ ಮತಗಳಿಂದ ಅಧ್ಯಕ್ಷೆಯಾಗಿ ಆಯ್ಕೆಯಾದರೆ, ಬಿಜೆಪಿ ಬೆಂಬಲಿತ ಸದಸ್ಯ ದಯಾನಂದ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆದರೆ ಪಾಲಡ್ಕ ಪಂಚಾಯಿತಿಯಲ್ಲಿ ನಡೆದ ಉಪಾಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮಾತ್ರ ಹೈಡ್ರಾಮ ಸೃಷ್ಟಿಯಾಗಿತ್ತು. ಒಟ್ಟು 16 ಸದಸ್ಯಬಲದ ಪಾಲಡ್ಕ ಗ್ರಾಮ ಪಂಚಾಯಿತಿಯಲ್ಲಿ 12 ಬಿಜೆಪಿ, 1 ಕಾಂಗ್ರೆಸ್ ಹಾಗೂ ಮೂವರು ಪಕ್ಷೇತರ ಸದಸ್ಯರಿದ್ದಾರೆ. ಆದರೆ ಅಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿದ್ದ ಹಿನ್ನಲೆಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯೆ ಅಮಿತಾ ನಾಯ್ಕ್ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಆದರೆ ಉಪಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಮಾತ್ರ ಬಿಜೆಪಿ ಪಾಲಿಗೆ ಕಗ್ಗಂಟಾಗಿ ಪರಿಣಮಿಸಿತ್ತು. ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ಉಪಾಧ್ಯಕ್ಷ ಸ್ಥಾನಕ್ಕೆ ರಂಜಿತ್ ಅವರನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿತ್ತು, ಆದರೆ ಇನ್ನೋರ್ವ ಬಿಜೆಪಿ ಬೆಂಬಲಿತ ಸದಸ್ಯ ಪ್ರವೀಣ್ ಸಿಕ್ವೇರಾ ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದಾಗ ಇದಕ್ಕೆ ಒಪ್ಪದಿದ್ದಾಗ ಕೊನೆಗೂ ಚುನಾವಣೆ ಅನಿವಾರ್ಯವಾಯಿತು. ಉಪಾಧ್ಯಕ್ಷ ಸ್ಥಾನಕ್ಕೆ ಪ್ರವೀಣ್ ಸಿಕ್ವೇರಾ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಳಿಕ ನಡೆದ ಚುನಾವಣೆಯಲ್ಲಿ ಬಂಡಾಯ ಅಭ್ಯರ್ಥಿ ಪ್ರವೀಣ್ ಸಿಕ್ವೇರಾ ಅವರು ಬಿಜೆಪಿ ಸದಸ್ಯರ ಅಡ್ಡಮತದಾನದಿಂದ 9 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರೆ, ಬಿಜೆಪಿ ಬೆಂಬಲಿತ ಅಭ್ಯರ್ಥಿ ರಂಜಿತ್ ಕೇವಲ 7 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ.

ಇತ್ತ ಕಾಂಗ್ರೆಸ್ ಹಾಗೂ ಪಕ್ಷೇತರರ ಬೆಂಬಲದಿAದ ಗೆದ್ದ ಪ್ರವೀಣ್ ಸಿಕ್ವೇರಾ ಅವರನ್ನು ಕಾಂಗ್ರೆಸ್ ಮುಖಂಡ ಮಿಥುನ್ ರೈ ಭೇಟಿ ಮಾಡಿ ಮಾತುಕತೆ ನಡೆಸಿ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದರು. ಇತ್ತ ಅನಾಯಾಸವಾಗಿ ಗೆಲ್ಲುವ ಕನಸು ಕಂಡಿದ್ದ ಬಿಜೆಪಿ ನಾಯಕರು ಈ ಬೆಳವಣಿಗೆಯಿಂದ ಕಂಗಾಲಾಗಿದ್ದಾರೆ. ಇದರಿಂದ ಕೇವಲ ಒಂದು ಸದಸ್ಯ ಬಲ ಹೊಂದಿದ್ದ ಕಾಂಗ್ರೆಸ್ ಗೆ ಬಿಜೆಪಿಯ ಬಂಡಾಯದ ಫಲವಾಗಿ ಉಪಾಧ್ಯಕ್ಷ ಪಟ್ಟ ಲಭಿಸಿದ್ದು ಇದು ಕಾಂಗ್ರೆಸ್ ಪಾಲಿಗೆ ಬಯಸದೇ ಬಂದ ಭಾಗ್ಯವಾಗಿ ಪರಿಣಮಿಸಿದೆ.





