Share this news

ಬೆಂಗಳೂರು: ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿಯ ನಡುವೆಯೂ ರಾಜ್ಯ ಸರ್ಕಾರ ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಹರಿಸುತ್ತಿರುವುದಕ್ಕೆ ಪ್ರತಿಪಕ್ಷಗಳು ತೀವೃ ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ಕುರಿತು ಪ್ರಾಧಿಕಾರದ ನಿರ್ಧಾರವನ್ನು ಪುನರ್ ಪರಿಶೀಲಿಸುವಂತೆ ಮನವಿ ಮಾಡುವುದಾಗಿ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ. ಪ್ರತಿನಿತ್ಯ ೧೦ ಸಾವಿರ ಕ್ಯೂಸೆಕ್ಸ್ ನಂತೆ ೧೫ ದಿನಗಳ ಕಾಲ ತಮಿಳುನಾಡಿಗೆ ನೀರು ಹರಿಸಲಾಗುತ್ತಿದ್ದು, ಸರ್ಕಾರದ ನಿಲುವಿನ ವಿರುದ್ಧ ವ್ಯಾಪಕ ಆಕ್ರೋಶದ ಹಿನ್ನಲೆಯಲ್ಲಿ ನೀರು ಹರಿಸುವ ನಿರ್ಧಾರ ಪುನರ್ ಪರಿಶೀಲಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ ಮನವಿ ಮಾಡಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಗೃಹ ಕಚೇರಿ ಕೃಷ್ಣಾದ ಬಳಿ ಸುದ್ದಿಗಾರರ ಜತೆ ಮಾತನಾಡಿದ ಡಿಕೆ ಶಿವಕುಮಾರ್ ನಮ್ಮಲ್ಲಿ ಮಳೆಕೊರತೆಯಿಂದ ನೀರಿನ ಅಭಾವ ಹೆಚ್ಚಾಗಿದೆ. ಆದರೂ ಆರಂಭದಲ್ಲಿ ನಾವು ತಮಿಳುನಾಡಿಗೆ ನೀರು ಹರಿಸಿದ್ದೇವೆ. ಆದರೂ ಅವರನ್ನು ತೃಪ್ತಿಪಡಿಸಲು ಆಗುತ್ತಿಲ್ಲ. ನಮಗೆ ಕೃಷಿ ಉದ್ದೇಶಕ್ಕಿಂತ ಕುಡಿಯುವ ಉದ್ದೇಶಕ್ಕೆ ನೀರು ಇಟ್ಟುಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರಕ್ಕೆ ನಿರ್ಧಾರ ಪುನರ್ ಪರಿಶೀಲಿಸುವಂತೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.


ಕುಮಾರಸ್ವಾಮಿಯವರು ಸರ್ವಪಕ್ಷ ಸಭೆ ಕರೆಯುವ ಕುರಿತು ಮಾಡಿರುವ ಟ್ವೀಟ್ ಬಗ್ಗೆ ಪ್ರತಿಕ್ರಿಯಿಸ ಡಿಕೆಶಿ ಕುಮಾರಸ್ವಾಮಿ ಅವರು ಕೇಳಿರೋದ್ರಲ್ಲಿ ಯಾವುದೇ ತಪ್ಪಿಲ್ಲ. ಕೇವಲ ಕಾವೇರಿ ವಿಚಾರ ಮಾತ್ರವಲ್ಲ, ಮಹದಾಯಿ, ಕೃಷ್ಣ ಸೇರಿದಂತೆ ರಾಜ್ಯದ ಪ್ರಮುಖ ವಿಚಾರಗಳ ಬಗ್ಗೆ ಸರ್ವಪಕ್ಷಗಳ ಜತೆ ಚರ್ಚೆ ಮಾಡುವುದರಲ್ಲಿ ಯಾವುದೇ ತಪ್ಪಿಲ್ಲ. ನಾವು ಕೂಡ ಸರ್ವಪಕ್ಷ ಸಭೆ ನಡೆಸುವ ಬಗ್ಗೆ ಆಲೋಚನೆ ಮಾಡಿದ್ದೇವೆ. ಬೊಮ್ಮಾಯಿಯವರು ಕೂಡ ತಮಿಳುನಾಡಿಗೆ ನೀರು ಬಿಡಬಾರದು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಹಿಂದೆ ಅವರ ಸರ್ಕಾರ ಇದ್ದಾಗಲೂ ಸಂಕಷ್ಟದ ಸಮಯದಲ್ಲಿ ತಮಿಳುನಾಡಿಗೆ ನೀರು ಹರಿಸಲಾಗಿತ್ತು. ದೇವೇಗೌಡರು ಪ್ರಧಾನಿಯಾಗಿದ್ದಾಗಲೂ ನೀರು ಬಿಡಲಾಗಿತ್ತು. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ ನೀರು ಬಿಡಲಾಗಿತ್ತು. ಈ ಬಗ್ಗೆ ದಾಖಲೆಗಳಿವೆ. ಈ ವಿಚಾರದಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ. ನಮ್ಮ ಪರಿಸ್ಥಿತಿ ಹದಗೆಟ್ಟಿದ್ದು ತಮಿಳುನಾಡಿನವರ ಆಗ್ರಹ ಮುಂದುವರೆದಿದೆ ಎಂದು ಹೇಳಿದರು.

 

 

Leave a Reply

Your email address will not be published. Required fields are marked *