ಮೂಡಬಿದಿರೆ: ಒಳಚರಂಡಿಯ ಕೊಳಚೆನೀರು ಬ್ಲಾಕ್ ಆಗಿ ರಸ್ತೆಯ ತುಂಬೆಲ್ಲಾ ಹರಿಯುತ್ತಿದ್ದು ಸುತ್ತಮುತ್ತಲಿನ ಪರಿಸರ ಗಬ್ಬುನಾರುತ್ತಿದ್ದರೂ ಮೂಡಬಿದಿರೆ ಪುರಸಭೆ ಮಾತ್ರ ಈ ಕುರಿತು ಕ್ರಮಕ್ಕೆ ಮುಂದಾಗದೇ ನಿರ್ಲಕ್ಷ್ಯ ವಹಿಸಿದೆ ಎಂದು ಸ್ಥಳೀಯರು ಪುರಸಭಾ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಮೂಡಬಿದಿರೆಯ ಸ್ವರಾಜ್ಯ ಮೈದಾನದ ರಸ್ತೆಗೆ ಕನ್ನಡ ಭವನದ ಅನತಿ ದೂರಲ್ಲಿನ ಒಳಚರಂಡಿ ಮ್ಯಾನ್ ಹೋಲ್ ನಿಂದ ಕೊಳಚೆನೀರು ಇಡೀ ರಸ್ತೆ ತುಂಬಾ ಹರಿಯುತ್ತಿದ್ದರು ಇದೇ ರಸ್ತೆಯಲ್ಲಿ ಸಾಗುವ ಸಾರ್ವಜನಿಕರು ಹಾಗೂ ವಾಹನ ಸವಾರರು ಮೂಗುಮುಚ್ಚಿಕೊಂಡೇ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕೊಳಚನೆ ನೀರಿನ ಜತೆಗೆ ಘನತ್ಯಾಜ್ಯಗಳು ಕೂಡ ರಸ್ತೆಯಲ್ಲಿ ಹರಿದು ಪರಿಸರವೇ ದುರ್ವಾಸನೆಯಿಂದ ಕೂಡಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿ ಶುರುವಾಗಿದೆ. ಕೊಳಚೆ ನೀರಿನ ಸಮಸ್ಯೆ ಕುರಿತಂತೆ ಸ್ಥಳಿಯರು ಪುರಸಭೆಗೆ ಸಾಕಷ್ಟು ಬಾರಿ ದೂರು ನೀಡಿದರೂ ಅಧಿಕಾರಿಗಳು ಮನವಿ ಸ್ಪಂದಿಸದೇ ನಿರ್ಲಕ್ಷ್ಯ ತೋರಿದ್ದಾರೆ ಎಂದು ಸ್ಥಳೀಯ ನಾಗರಿಕರು ಪುರಸಭೆಗೆ ಹಿಡಿಶಾಪ ಹಾಕಿದ್ದಾರೆ. ಸಮಾಜದ ಆರೋಗ್ಯ ಕಾಪಾಡುವ ಹೊಣೆಗಾರಿಕೆಯಿರುವ ಪುರಸಭೆ ಆಡಳಿತ ಇಂತಹ ವಿಚಾರಗಳಲ್ಲಿ ಬೇಜವಾಬ್ದಾರಿಯಾಗಿ ವರ್ತಿಸುವುದು ಸರಿಯಲ್ಲ. ತಕ್ಷಣವೇ ಕೊಳಚೆ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಇಲ್ಲವಾದರೆ ಇದೇ ಸಾರ್ವಜನಿಕ ರಸ್ತೆಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಬೇಕಾದೀತು ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಜನರ ಆರೋಗ್ಯ ರಕ್ಷಣೆ ಹಾಗೂ ಮೂಲಸೌಕರ್ಯಗಳನ್ನು ಒದಗಿಸುವುದು ಸ್ಥಳೀಯಾಡಳಿತಗಳ ಜವಾಬ್ದಾರಿಯಾಗಿದೆ. ಸಾಕಷ್ಟು ಜನಸಂದಣಿಯಿರುವ ನಗರದ ಹೃದಯಭಾಗದ ರಸ್ತೆಯಲ್ಲೇ ಇಂತಹ ಸ್ಥಿತಿ ನಿರ್ಮಾಣವಾಗಿದ್ದು, ಪುರಸಭೆ ಆಡಳಿತ ಇದನ್ನು ಆದ್ಯತೆ ನೆಲೆಯಲ್ಲಿ ದುರಸ್ತಿ ಮಾಡಬೇಕಿದೆ.









