ಕಾರ್ಕಳ: ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಚುನಾವಣೆಯಲ್ಲಿ ಬಿಜೆಪಿಯಲ್ಲಿ ಬಂಡಾಯದ ಬೆಂಕಿ ಹೊತ್ತಿಕೊಂಡಿದ್ದು, ಅವಿರೋಧವಾಗಿ ಆಯ್ಕೆಯಾಗಬೇಕಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಬಿಜೆಪಿ ಬೆಂಬಲಿತ ಅಧಿಕೃತ ಅಭ್ಯರ್ಥಿಯನ್ನೇ ಬಿಜೆಪಿ ಬೆಂಬಲಿತ ಬಂಡಾಯ ಅಭ್ಯರ್ಥಿ ಸೋಲಿಸಿ ಗೆಲುವಿನ ನಗೆ ಬೀರಿದ್ದಾರೆ.

ಒಟ್ಟು 15 ಸದಸ್ಯಬಲದ ನಲ್ಲೂರು ಪಂಚಾಯಿತಿಯಲ್ಲಿ 15 ಸ್ಥಾನಗಳನ್ನೂ ಬಿಜೆಪಿ ಬೆಂಬಲಿತರೇ ಗೆದ್ದು ಅಧಿಕಾರ ಹಿಡಿದ್ದಿದ್ದರು. ಆದರೆ ಈ ಪೈಕಿ ಓರ್ವ ಸದಸ್ಯ ತನ್ನ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಇನ್ನೋರ್ವ ಸದಸ್ಯ ಚುನಾವಣೆಗೆ ಗೈರಾದ ಹಿನ್ನಲೆಯಲ್ಲಿ ಶುಕ್ರವಾರ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ 13 ಸದಸ್ಯರು ಭಾಗಿಯಾಗಿದ್ದರು.

ಅಧ್ಯಕ್ಷ ಸ್ಥಾನವು ಸಾಮಾನ್ಯ ವರ್ಗಕ್ಕೆ ಮೀಸಲಾದ ಹಿನ್ನಲೆಯಲ್ಲಿ ಬಿಜೆಪಿ ಬೆಂಬಲಿತ ಅತ್ಯಂತ ಪ್ರಭಾವೀ ಸದಸ್ಯ ಸುಮಿತ್ ಮಡಿವಾಳ ಅಧಿಕೃತ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸೂಚಿಸಲಾಗಿತ್ತು, ಆದರೆ ಇನ್ನೋರ್ವ ಬಿಜೆಪಿ ಬೆಂಬಲಿತ ಸದಸ್ಯ ಅಶೋಕ್ ತನಗೆ ಅವಕಾಶ ನೀಡಬೇಕೆಂದು ಪಟ್ಟುಹಿಡಿದ್ದಿದ್ದರು. ಇವರಿಬ್ಬರ ನಡುವೆ ಹೊಂದಾಣಿಕೆಯಾಗದ ಹಿನ್ನಲೆಯಲ್ಲಿ ಅಂತಿಮವಾಗಿ ಅಶೋಕ್ ಅಂತಿಮವಾಗಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಅಂತಿಮವಾಗಿ ಅಶೋಕ್ ಅವರು 7 ಮತಗಳನ್ನು ಪಡೆದರೆ, ಬಿಜೆಪಿ ಬೆಂಬಲಿತ ಅಧಿಕೃತ ಅಭ್ಯರ್ಥಿ ಸುಮಿತ್ ಮಡಿವಾಳ 6 ಮತಗಳನ್ನು ಪಡೆಯುವ ಮೂಲಕ ಒಂದು ಮತದ ಅಂತರದಿAದ ಪರಾಭವಗೊಂಡು ತೀವೃ ಮುಖಭಂಗ ಅನುಭವಿಸಿದ್ದಾರೆ.ನಲ್ಲೂರು ಪಂಚಾಯಿತಿಯಲ್ಲಿ ಬಿಜೆಪಿ ಬೆಂಬಲಿತರ ಆಡಳಿತವಿದ್ದರೂ ಸದಸ್ಯರ ನಡುವಿನ ಹೊಂದಾಣಿಕೆ ಕೊರತೆ ಹಾಗೂ ನಾಯಕತ್ವದ ವಿಚಾರದಲ್ಲಿ ಉದ್ಭವಿಸಿದ್ದ ಗೊಂದಲವು ಚುನಾವಣೆ ಸಂದರ್ಭದಲ್ಲಿ ಬಟಾಬಯಲಾಗಿದೆ.
ಉಪಾಧ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ ಮಹಿಳೆಯ ಪಾಲಾಗಿದ್ದು ತಾರಾ ಮಲೆಕುಡಿಯ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.





