ಮೂಡಬಿದಿರೆ: ತಾಲೂಕಿನ ಕಲ್ಲಮುಂಡ್ಕೂರು ಗ್ರಾಮದ ತೊಡಂಕಿಲ ಸಾಲ್ಯಾನ್ ಕುಟುಂಬಸ್ಥರ ನಾಗರ ಬನದಲ್ಲಿ ನಾಗರ ಪಂಚಮಿ ದಿನ ನೂರಾರು ಭಕ್ತರು ನಾಗಬನಕ್ಕೆ ಆಗಮಿಸಿ ಶ್ರದ್ಧಾ ಭಕ್ತಿಯಿಂದ ನಾಗದೇವರಿಗೆ ಹಾಲು ಸಿಯಾಳ ಅಭಿಷೇಕದೊಂದಿಗೆ ನಾಗದೇವರ ಪೂಜೆ ಮಾಡಿ ಕೃತಾರ್ಥರಾದರು.
ತುಳುನಾಡು ಹಿಂದೆ ನಾಗಬನ ಖಂಡವೆಂದು ಪ್ರಸಿದ್ಧಿ ಪಡೆದಿತ್ತು. ಇಲ್ಲಿನ ಜನರು ನಾಗನನ್ನು ಪ್ರತ್ಯಕ್ಷ ದೈವವೆಂದು ನಂಬಿ ಆರಾಧಿಸುತ್ತಾರೆ. ನಾಗರಕಲ್ಲು ಹಾಕಿ ನಾಗನಿಗೆ ತನು ಎರೆದು ಭಕ್ತಿಯಿಂದ ವಿಶೇಷವಾಗಿ ನಾಗರಪಂಚಮಿ ದಿನ ನಾಗನಿಗೆ ಪೂಜೆ ಸಲ್ಲಿಸುವುದು ಅನಾದಿ ಕಾಲದಿಂದಲೂ ನಡೆಸಿಕೊಂಡು ಬಂದ ಸಂಪ್ರದಾಯ.
ನಾಗರ ಪಂಚಮಿ ದಿನ ಎಲ್ಲರೂ ಶುದ್ಧಾಚಾರವನ್ನು ಪಾಲಿಸಿ ತಮ್ಮ ಮೂಲ ನಾಗಬನಕ್ಕೆ ಹೋಗಿ ನಾಗನಿಗೆ ತನು ಎರೆಯುತ್ತಾರೆ. ಮೂಲ ನಾಗ ಬನ ಇಲ್ಲದವರು ತಮ್ಮ ಗ್ರಾಮದ ಬನ ಅಥವಾ ಶ್ರೀ ಕುಡುಪು ಕ್ಷೇತ್ರ ದಲ್ಲಿ ನಾಗನಿಗೆ ಹಾಲೆರೆಯುತ್ತಾರೆ. ಅದರಲ್ಲೂ ಸುಬ್ರಹ್ಮಣ್ಯ ಕ್ಷೇತ್ರದ ನಾಗನಿಗೆ ಪೂಜೆ ಸಲ್ಲಿಸಿದರೆ ಸರ್ವ ದೋಷ ಪರಿಹಾರ ಆಗುತ್ತದೆ ಎಂಬುದು ನಂಬಿಕೆ.
ನಾಗರ ಪಂಚಮಿಯಂದು ಪುರೋಹಿತರು ನಾಗನಕಲ್ಲನ್ನು ಶುದ್ಧ ನೀರಿನಿಂದ ತೊಳೆದು ಹಾಲು, ತುಪ್ಪ, ಸಿಯಾಳದ ಅಭಿಷೇಕ ಮಾಡುತ್ತಾರೆ. ಬಳಿಕ ನಾಗನಿಗೆ ಅರಸಿನ ಹಚ್ಚಿ ನಾಗನಿಗೆ ಪ್ರಿಯವಾದ ಕೇದಗೆ, ಸಂಪಿಗೆ. (ಸಿಂಗಾರ) ಅಡಿಕೆಹೂವಿನಿಂದ ಅಲಂಕರಿಸಿ, ಅರಳು ಬೆಲ್ಲ ಬಾಳೆಹಣ್ಣಿನ ನಾಗತಂಬಿಲ ಅರ್ಪಿಸಲಾಗುತ್ತದೆ.
ನಾಗನಿಗೆ ತನುಎರೆಯುವುದೆಂದರೆ ತಂಪು ಮಾಡುವುದೆಂದು ಎಂದು ಅರ್ಥ. ಇಲ್ಲಿ ನಾಗನ ಕಲ್ಲಿಗೆ ಅರ್ಪಿಸಿದ ಹಾಲು ಸಿಯಾಳ ಭೂಮಿಯ ಒಡಲು ಸೇರಿ ತಂಪು ಮಾಡುತ್ತದೆ ಜೊತೆಗೆ ಮಳೆ ನೀರಿನೊಂದಿಗೆ ಹಾಲು ಸಿಯಾಳವು ಕಡಲು ಸೇರುತ್ತದೆ ಎನ್ನುವ ನಂಬಿಕೆಯಿದೆ.