Share this news

ರಾಮನಗರ: ಕನಕಪುರ ತಾಲೂಕಿನ ಸಾತನೂರು ಬಳಿಯ ಕೆಮ್ಮಾಳೆ ಗೇಟ್ ಬಳಿ ಸೋಮವಾರ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಕಾರು ಮುಖಾಮುಖಿ ಡಿಕ್ಕಿ ಹೊಡೆದಿದ್ದು, ಈ ಭೀಕರ ಅಪಘಾತದಲ್ಲಿ ಕಾರಿನಲ್ಲಿದ್ದ 6 ಮಂದಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.

ಸೋಮವಾರ ಸಂಜೆ 4 ಗಂಟೆ ಸುಮಾರಿಗೆ ಸರ್ಕಾರಿ ಬಸ್ಸು ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು,ಕ್ವಾಲೀಸ್ ವಾಹನದಲ್ಲಿದ್ದ 6 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೃತರನ್ನು ನಾಗೇಶ್, ಪುಟ್ಟರಾಜು, ಜೋತಿರ್ಲಿಂಗಪ್ಪ (ಕಾರು ಮಾಲೀಕ), ಗೋವಿಂದ, ಕುಮಾರ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬೆಂಗಳೂರು ಮೂಲದವರಾಗಿದ್ದಾರೆ ಎಂದು ತಿಳಿದುಬಂದಿದೆ.  ಕಾರಿನ ಹಿಂಬದಿ ಸೀಟಿನಲ್ಲಿದ್ದ ಹಲವು ಜನರಿಗೆ ಗಂಭೀರ ಗಾಯಗಳಾಗುವೆ.  ಮಹದೇಶ್ವರ ಬೆಟ್ಟದಿಂದ ವಾಪಾಸ್ ಬರುತ್ತಿದ್ದ ಕ್ವಾಲೀಸ್ ಕಾರು ವೇಗವಾಗಿ ಹೋಗಿ ಬಸ್‌ಗೆ ಡಿಕ್ಕಿ ಹೊಡೆದಿದೆ. ಇನ್ನು ಬಸ್‌ನಲ್ಲಿದ್ದ ಚಾಲಕ ಸೇರಿದಂತೆ ಹಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಸಾತನೂರು ಪೊಲೀಸರ‌ ದೌಡಾಯಿಸಿದ್ದಾರೆ.

ಕಾರಿನಲ್ಲಿದ್ದ ಎಲ್ಲರೂ ಸ್ನೇಹಿತರಾಗಿದ್ದು, ಕಾರು ಮಾಡಿಕೊಂಡು ಜೊತೆಗೂಡಿ ಮಹದೇಶ್ವರ ಬೆಟ್ಟಕ್ಕೆ ಮಲೆ ಮಹದೇಶ್ವರನ ದರ್ಶನಕ್ಕೆ ತೆರಳಿದ್ದರು. ದರ್ಶನ ಮುಗಿಸಿ ಅಲ್ಲಿಂದ ವಾಪಸ್ ಬರುವಾಗ ದುರ್ಘಟನೆ ಸಂಭವಿಸಿದೆ. ಕಾರು ಮೈಸೂರು ಕಡೆಯಿಂದ ಬರುತ್ತಿತ್ತು. ಬಸ್‌ ಸಾತನೂರು ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿತ್ತು. ಮುಖಾಮುಖಿ ಢಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

 

ಕಾರು ಹಾಗೂ ಬಸ್‌ ಮುಖಾಮುಖಿ ಡಿಕ್ಕಿಯಿಂದಾಗಿ ಕಾರಿನ ಅರ್ಧ ಭಾಗ ಬಸ್‌ನ ಅಡಿಗೆ ತೂರಿಕೊಂಡು ಹೋಗಿದೆ. ಇನ್ನು ಮೃತ ದೇಹಗಳನ್ನು ಹೊರ ತೆಗೆಯಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸ್ಥಳಕ್ಕೆ ಜೆಸಿಬಿ ಹಾಗೂ ಕ್ರೇನ್‌ಗಳನ್ನು ತರಿಸಲಾಗಿದೆ. ಕಾರಿನ ಭಾಗಗಳು ಸಂಪೂರ್ಣ ನಜ್ಜು ಗುಜ್ಜಾಗಿದ್ದರಿಂದ ಮೃತ ದೇಹಗಳನ್ನು ಹೊರಗೆ ತೆಗೆಯಲು ಕಷ್ಟವಾಗುತ್ತಿದೆ, ಒಂದು ಕಡೆ ಜೆಸಿಬಿಯಿಂದ ಕಾರಿನ ಕೆಲ ಭಾಗಗಳನ್ನು ಹಿಡಿದುಕೊಂಡು, ಕ್ರೇನ್‌ನಿಂದ ಇನ್ನೊಂದು ಭಾಗದಲ್ಲಿ ಹಗ್ಗವನ್ನು ಕಟ್ಟಿ ಎಳೆಯಲಾಗುತ್ತಿದೆ. ಹೀಗೆ, ಕಾರಿನ ನಜ್ಜುಗುಜ್ಜಾದ ಭಾಗವನ್ನು ಅಗಲಿಸಿ, ಪ್ರತ್ಯೇಕಗೊಳಿಸಿ ಮೃತ ದೇಹಗಳನ್ನು ಹೊರಗೆ ತೆಗೆಯಲಾಗುತ್ತಿದೆ. ಇನ್ನು ಕಾರಿನ ಹಿಂಭಾಗದಲ್ಲಿ ಕುಳಿತು ಗಂಭೀರ ಗಾಯಗೊಂಡವರನ್ನು ಹಾಗೂ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಗಾಯಾಳುಗಳನ್ನು ಆಂಬುಲೆನ್ಸ್‌ ಮೂಲಕ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.

 

Leave a Reply

Your email address will not be published. Required fields are marked *