ಕಾರ್ಕಳ:ಕಾಂಗ್ರೆಸ್ ನೇತೃತ್ವದ ಸರಕಾರವು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಗೊಳಿಸಲು ಮುಂದಾಗಿದ್ದು, ಇದನ್ನು ವಿರೋಧಿಸಿ ಕಾರ್ಕಳದಲ್ಲಿ ಎಬಿವಿಪಿ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಸಂಚಾಲಕ ಗಣೇಶ್ ಪೂಜಾರಿ ಮಾತನಾಡಿ, ರಾಜ್ಯ ಕಾಂಗ್ರೆಸ್ ನೇತೃತ್ವದ ಸರ್ಕಾರವು ದ್ವೇಷದ ರಾಜಕಾರಣವನ್ನು ಮಾಡುತ್ತಿದೆ. ವಿದ್ಯಾರ್ಥಿಗಳು ಹಲವಾರು ರೀತಿಯ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿದ್ದು ಅದರ ಬಗ್ಗೆ ಗಮನಹರಿಸದೇ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದು ಪಡಿಸಲು ಹೊರಟಿದೆ. ಆದರೆ ವಿದ್ಯಾರ್ಥಿ ಸಮುದಾಯವು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಯನ್ನು ಒಪ್ಪಿಕೊಂಡಿದ್ದು ಆದ್ದರಿಂದ ಸರಕಾರ ರದ್ದುಮಾಡುವ ವಿಚಾರವನ್ನು ಕೈಬಿಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡ ವಿನಿತ್ ರಾವ್ ಪ್ರಾಸ್ತಾವಿಕವಾಗಿ ಮಾತನಾಡಿ, ಸರಕಾರವು ವಿದ್ಯಾರ್ಥಿ ವಿರೋಧಿ ನಿಲುವನ್ನು ಶೀಘ್ರವಾಗಿ ಕೈಬಿಡಬೇಕೆಂದು ಆಗ್ರಹಿಸಿದರು.
ಎಬಿವಿಪಿ ವಿದ್ಯಾರ್ಥಿನಿ ಪ್ರಮುಖ್ ಸೌಮ್ಯ ಜಿ ನಾಯ್ಕ್ ಮಾತನಾಡಿ, ಬಡಪೋಷಕರು ಮಕ್ಕಳಿಗೆ ಕಷ್ಟಪಟ್ಟು ಶಿಕ್ಷಣ ನೀಡುವಾಗ ಸರಕಾರ ದ್ವೇಷದ ರಾಜಕಾರಣಕ್ಕೆ ಶಿಕ್ಷಣ ನೀತಿಗಳನ್ನು ಬದಲಿಸುತ್ತಾ ವಿದ್ಯಾರ್ಥಿಗಳ ಜೀವನದಲ್ಲಿ ಚೆಲ್ಲಾಟವಾಡುತ್ತಿದೆ ಎಂದರು. ಸಚಿವರು ಎನ್‌ಇಪಿ ಉತ್ತರಭಾರತದ ಸಂಸ್ಕೃತಿಯನ್ನು ಹೇರುತ್ತದೆ ಎಂದು ಹೇಳುತ್ತಾರೆ ಹಾಗಾದರೆ ಉತ್ತರ ಭಾರತ ಅಮೇರಿಕ, ಇಂಗ್ಲೆಂಡಿನಲ್ಲಿದೆಯೇ ಎಂದು ಪ್ರಶ್ನಿಸಿದರು.
ತಾಲೂಕು ಸಹವಿದ್ಯಾರ್ಥಿನಿ ಪ್ರಮುಖ್ ಮನ್ವಿತ ಕುಲಾಲ್ ಮಾತನಾಡಿ, ಕೇಂದ್ರ ಸರಕಾರ ಎನ್‌ಇಪಿ ಜಾರಿ ಮಾಡುವಾಗ ಹಲವಾರು ರೀತಿಯ ತಜ್ಞರ ಸಲಹೆಯನ್ನು ಪಡೆದಿದ್ದರು. ಆದರೆ ಸರಕಾರ ಯಾವುದೇ ಸಲಹೆ ಪಡೆಯದೆ ರದ್ದುಮಾಡಲು ಹೊರಟಿದೆ ಇದು ಖಂಡನೀಯ. ರದ್ದುಮಾಡುವುದಾದರೆ ಸರಿಯಾದ ಕಾರಣಗಳನ್ನು ನೀಡಬೇಕು. ಅದನ್ನು ಬಿಟ್ಟು ಸಂವಿಧಾನ ವಿರೋಧಿಯಾಗಿ ನಡೆಯಬಾರದು ಎಂದರು.
ಈ ಸಂದರ್ಭದಲ್ಲಿ ತಾಲೂಕು ಸಂಚಾಲಕ ಶ್ರೇಯಸ್ ಅಂಚನ್, ರಾಜ್ಯ ಕಾರ್ಯಕಾರಣಿ ಸದಸ್ಯ ಸುಶಾನ್ ಕಾಂತಾವರ, ನಗರ ಕಾರ್ಯದರ್ಶಿ ಅಕ್ಷಯ್, ನಗರ ಸಹಕಾರ್ಯದರ್ಶಿ ದೀಕ್ಷಿತ್ ಹಾಗೂ ಪ್ರಮುಖ ಕಾರ್ಯಕರ್ತರಾದ ವರುಣ್,ಪವನ್, ಕಾರ್ತಿಕ್, ಪ್ರೀತಮ್ ದೇವಾಡಿಗ ಉಪಸ್ಥಿತರಿದ್ದರು.