ಬೆಂಗಳೂರು : ಕೆಲ ದಿನಗಳ ಹಿಂದೆ ಸಿಸಿಬಿ ಪೊಲೀಸರು ಐವರು ಶಂಕಿತ ಉಗ್ರರನ್ನು ಬಂಧಿಸಿದ್ದರು. ತನಿಖೆ ವೇಳೆ ಅವರ ಬಳಿ ಗ್ರೆನೇಡ್ ಇರುವುದು ಪತ್ತೆಯಾಗಿತ್ತು.ಅದರ ಮೂಲ ಹುಡುಕುತ್ತಾ ಹೊರಟ ಪೊಲೀಸರಿಗೆ ಗ್ರೆನೇಡ್ ತಂದುಕೊಟ್ಟಿದ್ದು ಶಂಕಿತ ಉಗ್ರ ಜುನೈದ್ ಎನ್ನುವ ವಿಚಾರ ಬೆಳಕಿಗೆ ಬಂದಿತ್ತು. ಸದ್ಯ ಜುನೈದ್ ತಲೆ ಮರೆಸಿಕೊಂಡಿದ್ದು. 2017 ರಲ್ಲಿ ಆತನ ಜೊತೆಗಿದ್ದ ಸಹಚರ ಮೊಹಮ್ಮದ್ ಹರ್ಷದ್ ಖಾನ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಮೊಹಮ್ಮದ್ ಹರ್ಷದ್ ಖಾನ್ ಆರ್.ಟಿ.ನಗರ ಪೊಲೀಸ್ ಠಾಣೆಯ ರೌಡಿ ಶೀಟರ್. ಕೊಲೆ ,ಕೊಲೆ ಯತ್ನ, ಕಳ್ಳತನ ಸೇರಿದಂತೆ 17 ಕೇಸ್ ಗಳು ಈತನ ಮೇಲಿದೆ. 2017 ರಲ್ಲಿ ನಡೆದ ನೂರ್ ಅಹಮ್ಮದ್ ಎಂಬಾತನ ಕಿಡ್ನಾಪ್ ಮತ್ತು ಕೊಲೆ ಕೇಸ್ ನಲ್ಲಿ ಜುನೈದ್ ಸೇರಿದಂತೆ 21 ಜನ ಆರೋಪಿಗಳ ಪೈಕಿ ಈತನೂ ಒಬ್ಬ. ತಲೆ ಮರೆಸಿಕೊಂಡಿದ್ದ ಆಸಾಮಿಗಾಗಿ ವಿವಿಧ ಠಾಣೆಯ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಆಗಸ್ಟ್ 26 ರ ರಾತ್ರಿ ಹರ್ಷದ್ ಆರ್.ಟಿ.ನಗರ ಫ್ಲವರ್ ಮಾರ್ಕೆಟ್ ಹತ್ತಿರ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಮೊಹಮ್ಮದ್ ಹರ್ಷದ್ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ಹಲ್ಲೆಗೆ ಮುಂದಾಗಿದ್ದ. ಅಷ್ಟೇ ಅಲ್ಲದೆ ಸ್ವತಃ ತಾನೆ ಬ್ಲೇಡ್ ನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ. ಎರಡನೇ ಮಹಡಿಯಿಂದ ಜಿಗಿಯಲು ರೆಡಿಯಾಗಿದ್ದ. ಆದರೆ ಅಷ್ಟರಲ್ಲೇ ಪೊಲೀಸರು ಆತನನ್ನು ಲಾಕ್ ಮಾಡಿ ಬಂಧಿಸಿದ್ದಾರೆ. ಸದ್ಯ ಆರೋಪಿಯನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರಿಗೆ ಉಗ್ರ ಚಟುವಟಿಕೆಯ ಯಾವುದೇ ಹಿಂಟ್ ಕೂಡ ಸಿಕ್ಕಿಲ್ಲ. ಆದರೂ ಜುನೈದ್ ಜೊತೆಗೆ ಈಗಲು ಸಂಪರ್ಕದಲ್ಲಿದ್ದಾನಾ? ಉಗ್ರ ಚಟುವಟಿಕೆಯಲ್ಲಿ ಏನಾದ್ರು ಭಾಗಿಯಾಗಿದ್ದಾನಾ ಎನ್ನುವ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕುತ್ತಿದ್ದಾರೆ.