ಹೆಬ್ರಿ : ಹಿಂದೂ ಧರ್ಮದ ತಿಳುವಳಿಕೆ ನೀಡುವ ಉದ್ದೇಶದಿಂದ ಮಕ್ಕಳಲ್ಲಿ ರಾಮಾಯಣದ ಅರಿವು ಅಗತ್ಯ. ಶ್ರೀ ರಾಮನ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡಲ್ಲಿ ರಾಮ ರಾಜ್ಯ ಆಗುವುದರಲ್ಲಿ ಸಂಶಯವಿಲ್ಲ ಎಂದು ವಿದ್ವಾನ್ ಗುಡ್ಡೆಯಂಗಡಿ ರಾಘವೇಂದ್ರ ಭಟ್ ಹೇಳಿದರು.
ಅವರು ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮರ್ಣೆ, ವರಂಗ, ಪಡುಕುಡೂರು, ಅಂಡಾರು ಗ್ರಾಮಗಳ ವ್ಯಾಪ್ತಿಯ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗ ಮಟ್ಟದಲ್ಲಿ ಮಹಾಲಿಂಗೇಶ್ವರ ಭಜನಾ ಮಂಡಳಿಯ ಸಹಕಾರದಿಂದ ಮುನಿಯಾಲು ಕಾಡುಹೊಳೆ ಶ್ರೀ ಜಂಗಮೇಶ್ವರ ಮಠದಲ್ಲಿ ಭಾನುವಾರ ನಡೆದ ರಾಮಾಯಣ ಪರೀಕ್ಷೆಯ ಸಂದರ್ಭದಲ್ಲಿ ಮಾತನಾಡಿದರು.
ಈ ಸಂದರ್ಭದಲ್ಲಿ ಮಠದ ಆಡಳಿತ ಮೊಕ್ತೇಸರ ಚಿರಂಜಿತು ಅಜಿಲ, ಗೋಪಿನಾಥ ಭಟ್, ರಾಮದಾಸ್, ಗಣೇಶ ನಾಯಕ್ ಮತ್ತಿತರರು ಉಪಸ್ಥಿತರಿದ್ದರು. ಸ್ಥಳೀಯರಾದ ಉದಯ ಪ್ರಭು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಸುಮಾರು 250 ಮಕ್ಕಳು ರಾಮಾಯಣ ಪರೀಕ್ಷೆಯಲ್ಲಿ ಪಾಲ್ಗೊಂಡರು. ಪರೀಕ್ಷೆ ಬರೆದ ಎಲ್ಲಾ ಮಕ್ಕಳಿಗೆ ಪ್ರಶಸ್ತಿ ಪತ್ರ ಹಾಗೂ ಪ್ರಥಮ, ದ್ವಿತೀಯ ತೃತೀಯ ಸ್ಥಾನ ಗಳಿಸಿದ ವಿದ್ಯಾರ್ಥಿಗಳಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಟ್ಲಪಿಂಡಿ ದಿನ ಪ್ರಶಸ್ತಿ ಹಾಗೂ ನಗದು ನೀಡಿ ಗೌರವಿಸಲಾಗುವುದು.