ಕಾರ್ಕಳ:ಬೈಲೂರಿನ ಉಮಿಕಲ್ ಬೆಟ್ಟದಲ್ಲಿನ ಪರಶುರಾಮ ಪ್ರತಿಮೆಯ ನೈಜತೆ ಹಾಗೂ ಗುಣಮಟ್ಟದ ಪರೀಕ್ಷೆಗೆ ಆಗ್ರಹಿಸಿ ಕಳೆದ 6 ದಿನಗಳಿಂದ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹದ ಸ್ಥಳಕ್ಕೆ ಕುಂದಾಪುರ ಉಪವಿಭಾಗಾಧಿಕಾರಿ ರಶ್ಮಿ. ಎನ್ ಗುರುವಾರ ಭೇಟಿ ನೀಡಿ ಪ್ರತಿಭಟನಾನಿರತರ ಜತೆಗೆ ಮಾತುಕತೆ ನಡೆಸಿದರು.
ಈವೇಳೆ ಧರಣಿನಿರತರಾದ ಚಿತ್ತರಂಜನ್ ಶೆಟ್ಟಿ ಮಾತನಾಡಿ, ಈ ಹಿಂದೆ ಪ್ರತಿಮೆಯ ಗುಣಮಟ್ಟ ಹಾಗೂ ನೈಜತೆಯ ಪರೀಕ್ಷೆ ನಡೆಯಬೇಕೆಂದು ಒತ್ತಾಯಿಸಿದ್ದರೂ ನಮ್ಮ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸಿಲ್ಲ,ನಮಗೆ ನೀಡಿದ ಭರವಸೆ ಈಡೇರದ ಕಾರಣದಿಂದ ನಾವು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹವನ್ನು ನಡೆಸಬೇಕಾಯಿತು ಎಂದರು.ಕಾಮಗಾರಿ ಮುಗಿಯದೇ ಹಾಗೂ ಎಲ್ಲಾ ಇಲಾಖೆಗಳ ನಿರಾಕ್ಷೇಪಣ ಪತ್ರವನ್ನು ಪಡೆಯದೇ ಜಿಲ್ಲಾಡಳಿತ ತರಾತುರಿಯಲ್ಲಿ ಉದ್ಘಾಟನೆ ನಡೆಸಿರುವುದರ ಹಿಂದಿನ ಉದ್ದೇಶ ಏನಿತ್ತು ಎಂದು ಅವರು ಪ್ರಶ್ನಿಸಿದರು.ಸುಮಾರು 14.42 ಕೋಟಿ ವೆಚ್ಚದ ಪರಶುರಾಮ ಥೀಮ್ ಪಾರ್ಕ್ ಹಿಂದೂ ಧರ್ಮದ ನಂಬಿಕೆಯ ಸಂಕೇತವಾಗಿದೆ,ಈ ಯೋಜನೆಗೆ ನಮ್ಮ ಬೆಂಬಲವಿದೆ ಆದರೆ ಸಾರ್ವಜನಿಕರ ಹಾಗೂ ಹಿಂದೂಗಳ ಕಣ್ಣುತಪ್ಪಿಸಿ ನಕಲಿ ಪ್ರತಿಮೆ ಸ್ಥಾಪಿಸುವ ಅಗತ್ಯವೇನಿತ್ತು, ಇದು ಫೈಬರ್ ಗ್ಲಾಸ್ ಪ್ರತಿಮೆ ಎನ್ನುವ ಕುರಿತು ನಮ್ಮಲ್ಲಿ ದಾಖಲೆಯಿದೆ ಎಂದರು. ಈ ವಿಚಾರದಲ್ಲಿ ಜಿಲ್ಲಾಡಳಿತ ಪ್ರತಿಮೆಯ ಅಸಲಿಯತ್ತು ಪರೀಕ್ಷೆಗೆ ಹಿಂದೇಟು ಹಾಕುವ ಅಗತ್ಯತೆ ಏನಿದೆ ಎಂದು ಪ್ರಶ್ನಿಸಿದರು.ಯಾವುದೇ ಕಾರಣಕ್ಕೂ ಪ್ರತಿಮೆಯ ನೈಜತೆ ಪರೀಕ್ಷೆಯಾಗದ ಹೊರತು ಮುಷ್ಕರ ಹಿಂಪಡೆಯುವ ಪ್ರಶ್ನೆಯೇ ಇಲ್ಲವೆಂದು ಬಿಗಿಪಟ್ಟು ಹಿಡಿದರು.
ಇದಕ್ಕೆ ಎಸಿ ರಶ್ಮಿ ಎನ್ ಉತ್ತರಿಸಿ, ನಿಮ್ಮ ಬೇಡಿಕೆಗೆ ಜಿಲ್ಲಾಡಳಿತ ಸ್ಪಂದಿಸಲಿದೆ,ಮೊದಲು ನಿಮ್ಮ ಆರೋಗ್ಯದ ಕುರಿತು ಕಾಳಜಿ ವಹಿಸುವುದು ಜಿಲ್ಲಾಡಳಿತದ ಕರ್ತವ್ಯ,ಆದ್ದರಿಂದ ಧರಣಿ ಕೈಬಿಟ್ಟು ಆರೋಗ್ಯ ಕಾಪಾಡಿ ಎಂದರು. ಆದರೆ ಪ್ರತಿಮೆಯ ನೈಜತೆಯ ಕುರಿತ ಪರೀಕ್ಷೆಗೆ ಒಂದಷ್ಟು ನಿಯಮಾವಳಿದ್ದು ಎರಡು ತಿಂಗಳೊಳಗಾಗಿ ಪರೀಕ್ಷೆ ನಡೆಸುವ ಭರವಸೆ ನೀಡಿದರು. ಇದಕ್ಕೆ ಒಪ್ಪದ ಪ್ರತಿಭಟನಾಕಾರರು ಪ್ರತಿಮೆಯ ಪರೀಕ್ಷೆಗೆ ಅಷ್ಟು ಕಾಲಾವಕಾಶ ಕೊಡಲು ಸಾಧ್ಯವಿಲ್ಲ,ಅಷ್ಟು ಸಮಯಾವಕಾಶ ಪಡೆದು ನಮ್ಮನ್ನು ದಿಕ್ಕುತಪ್ಪಿಸಿ ಪ್ರತಿಮೆಯನ್ನು ಬದಲಿಸುವ ಹುನ್ನಾರ ಅಷ್ಟೇ,ಆದ್ದರಿಂದ ಒಂದು ವಾರದೊಳಗೆ ಗುಣಮಟ್ಟ ಪರೀಕ್ಷೆ ನಡೆಸಬೇಕೆಂದು ಧರಣಿನಿರತರು ಬಿಗಿಪಟ್ಟು ಹಿಡಿದರು.
ಇದಕ್ಕೆ ಹೋರಾಟಗಾರ ಮನವಿ ಆಲಿಸಲು ಬಂದ ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ದನಿಗೂಡಿಸಿ, ಪ್ರತಿಮೆಯ ನೈಜತೆಯ ಕುರಿತ ಪರೀಕ್ಷೆಗೆ ಎರಡು ತಿಂಗಳ ಸಮಯಾವಕಾಶ ಯಾಕೆ, ಇದರಿಂದ ಮತ್ತಷ್ಟು ಗೊಂದಲ ಸೃಷ್ಟಿಯಾಗುತ್ತದೆ,ಆದ್ದರಿಂದ ತಕ್ಷಣವೇ ಜಿಲ್ಲಾಡಳಿತ ದುರಸ್ತಿ ಕಾಮಗಾರಿ ಸ್ಥಗಿತಗೊಳಿಸಿ ಅಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕೆಂದು ಎಸಿ ರಶ್ಮಿ ಎನ್ ಅವರನ್ನು ಒತ್ತಾಯಿಸಿದರು.
ಇತ್ತ ಧರಣಿನಿರತರು ಅಂತಿಮವಾಗಿ ಪ್ರತಿಮೆಯ ಪರೀಕ್ಷೆಯನ್ನು ಒಂದು ತಿಂಗಳ ಒಳಗಾಗಿ ಮುಗಿಸಿದ್ದಲ್ಲಿ ಪ್ರತಿಭಟನೆ ವಾಪಾಸು ಪಡೆಯುವುದಾಗಿ ಬಿಗಿಪಟ್ಟು ಹಿಡಿದರು.ಆದರೆ ಈ ಕುರಿತು ಜಿಲ್ಲಾಡಳಿತ ನಮಗೆ ಅಧಿಕೃತ ಪತ್ರದ ಮೂಲಕ ಭರವಸೆ ನೀಡಬೇಕು ಎಂದರು.
ಕೊನೆಗೂ ಎಸಿ ರಶ್ಮಿ. ಎನ್ ಅವರು ಒಂದು ತಿಂಗಳೊಳಗಾಗಿ ಪ್ರತಿಮೆಯ ನೈಜತೆಯ ಪರೀಕ್ಷೆ ನಡೆಸುವ ಕುರಿತು ಮೌಖಿಕ ಭರವಸೆ ನೀಡಿದರು. ಆದರೆ ಈ ಭರವಸೆಗೆ ಒಪ್ಪದ ಪ್ರತಿಭಟನಾಕಾರರು ಇದು ಕೇವಲ ಭರವಸೆಯಾಗುತ್ತದೆ ಆದ್ದರಿಂದ ಜಿಲ್ಲಾಡಳಿತದ ಅಧಿಕೃತ ಪತ್ರದ ಮೂಲಕ ಭರವಸೆ ನೀಡಿದ್ದಲ್ಲಿ ಪ್ರತಿಭಟನೆ ಹಿಂಪಡೆಯುವುದಾಗಿ ಹೇಳಿದರು.ಅಂತಿಮವಾಗಿ ಪರಶುರಾಮ ಪ್ರತಿಮೆಯ ನೈಜತೆಯ ಪರೀಕ್ಷೆಯ ಕುರಿತ ವಿಚಾರದಲ್ಲಿ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.