Share this news

ಉಡುಪಿ:ಭಾರತದ ಸಂವಿಧಾನದ ತತ್ವಗಳನ್ನು ತಮ್ಮ ಜೀವನ ಮತ್ತು ಕರ್ತವ್ಯಗಳಲ್ಲಿ ಅಳವಡಿಸಿಕೊಂಡು ಪೀಠಿಕೆಗೆ ಬದ್ಧರಾಗುವ ಉದ್ದೇಶದಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸೆ.15ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲೆಯಾದ್ಯಂತ ಸಂವಿಧಾನ ಪೀಠಿಕೆಯನ್ನು ಒಟ್ಟಾಗಿ ಓದುವ ಬೃಹತ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿದ್ಯಾ ಕುಮಾರಿ,ಕೆ ಅವರು ಹೇಳಿದರು.

ಅವರು ಶನಿವಾರ ಉಡುಪಿಯ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,
ಭಾರತ ಸಂವಿಧಾನದ ಪೀಠಿಕೆಯನ್ನು ಓದುವ ಕಾರ್ಯಕ್ರಮವನ್ನು ಉಡುಪಿಯ ಅಜ್ಜರಕಾಡಿನ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮವೂ ನಡೆಯಲಿದೆ ಎಂದು ತಿಳಿಸಿದರು.

ಜಿಲ್ಲಾ ಮಟ್ಟದ ಅಧಿಕಾರಿಗಳು ಸಂವಿಧಾನ ಓದು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಬೇಕು. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿರುವ ಕಚೇರಿಗಳು ಹಾಗೂ ವಿದ್ಯಾಸಂಸ್ಥೆಗಳು ತಮ್ಮ ಕಚೇರಿ, ವಿದ್ಯಾಸಂಸ್ಥೆಗಳಲ್ಲಿ ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ಓದಬೇಕು ಎಂದು ಸೂಚಿಸಿದರು.
ಈ ಕಾರ್ಯಕ್ರಮದಲ್ಲಿ ರಾಜ್ಯದ ಎಲ್ಲಾ ವಿದ್ಯಾಸಂಸ್ಥೆಗಳು ಹಾಗೂ ಇಲಾಖೆಗಳು ಆನ್ಲೈನ್ ಮೂಲಕ ಪಾಲ್ಗೊಳ್ಳಲಿದ್ದು, ಅಂದು ಎಲ್ಲಾ ಸರ್ಕಾರಿ ಕಛೇರಿ, ಶಾಲಾ-ಕಾಲೇಜು, ವಿದ್ಯಾರ್ಥಿ ನಿಲಯಗಳಲ್ಲಿ ಸಂವಿಧಾನ ಪೀಠಿಕೆ ಓದಬೇಕು. ಈ ಮೂಲಕ ಸಂವಿಧಾನ ಪೀಠಿಕೆಯ ಮಹತ್ವ ಹಾಗೂ ಸಂವಿಧಾನದ ಮೌಲ್ಯ ಮತ್ತು ತತ್ವಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು.
ತಾಲ್ಲೂಕು ಮಟ್ಟದಲ್ಲಿ ತಹಶಿಲ್ದಾರ್ ಹಾಗೂ ತಾಲ್ಲೂಕು ಪಂಚಾಯತ್ ಅಧಿಕಾರಿಗಳು ಸೇರಿ ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಿ ಯಶಸ್ವಿಗೊಳಿಸಬೇಕು ಎಂದರು.


ಶಾಲಾ ಶಿಕ್ಷಣ ಇಲಾಖೆ, ಕಾಲೇಜು ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸಂವಿಧಾನ ಪೀಠಿಕೆ ಓದಲು ನೋಂದಣಿ ಮಾಡಿಸುವ ಗುರಿ ನಿಗದಿಪಡಿಸಿದ್ದು, ಸಕಾಲದಲ್ಲಿ ನೋಂದಣಿ ಕಾರ್ಯ ಸಂಪೂರ್ಣಗೊಳಿಸಿ ಎಂದು ನಿರ್ದೇಶನ ನೀಡಿದರು.
ಸಮಾಜ ಕಲ್ಯಾಣ ಇಲಾಖೆಯ http://thepreamble-swdkar.in ವೆಬ್ಸೈಟ್ ಮೂಲಕ ನೊಂದಾಯಿಸಿಕೊಂಡು ಪ್ರಜಾಪ್ರಭುತ್ವದ ಅಧಿಕೃತ ಆಚರಣೆಯಲ್ಲಿ ಭಾಗವಹಿಸುವಂತೆ ಸಾರ್ವಜನಿಕರನ್ನು ಪ್ರೇರೇಪಿಸುವ ಕಾರ್ಯವಾಗಬೇಕು ಎಂದರು.


ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ . ಹೆಚ್, ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅನಿತಾ ಮಡ್ಲೂರ್, ದಲಿತ ಸಂಘಟನೆಯ ಮುಖಂಡರುಗಳು ,ಸಂಘ ಸಂಸ್ಥೆಯ ಪದಾಧಿಕಾರಿಗಳು, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತದಾರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *