ಪಾಟ್ನಾ: ಬಿಹಾರದ ಶಿಕ್ಷಣ ಸಚಿವ ಚಂದ್ರಶೇಖರ್ ರಾಮಾಯಣವನ್ನು ಆಧರಿಸಿದ ಹಿಂದೂ ಧಾರ್ಮಿಕ ಪುಸ್ತಕವಾದ ರಾಮಚರಿತಮಾನಸವನ್ನು ಪೊಟ್ಯಾಶಿಯಂ ಸೈನೈಡ್ಗೆ ಹೋಲಿಸಿದ್ದಾರೆ. ಹಿಂದಿ ದಿವಸ್ ಪ್ರಯುಕ್ತ ಆಯೋಜಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಸಚಿವರು ಈ ಹೇಳಿಕೆ ನೀಡಿದ್ದಾರೆ. ನೀವು ಐವತ್ತೈದು ರೀತಿಯ ಭಕ್ಷ್ಯಗಳನ್ನು ಬಡಿಸಿ, ಅದರಲ್ಲಿ ಪೊಟ್ಯಾಶಿಯಂ ಸೈನೈಡ್ ಅನ್ನು ಬೆರೆಸಿದರೆ, ನೀವು ಅದನ್ನು ತಿನ್ನುತ್ತೀರಾ? ಹಿಂದೂ ಧರ್ಮದ ಧರ್ಮಗ್ರಂಥಗಳ ವಿಷಯವೂ ಅದೇ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ರಾಮಚರಿತಮಾನಸಕ್ಕೆ ನನ್ನ ಆಕ್ಷೇಪ ದೃಢವಾಗಿದೆ. ಅದು ನನ್ನ ಜೀವನದುದ್ದಕ್ಕೂ ಇರುತ್ತದೆ. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ ಎಂದು ಬಿಹಾರ ಸಚಿವರು ಹೇಳಿದ್ದಾರೆ. ಗಟಾರಕ್ಕೆ ಇಳಿಯುವವರ ಜಾತಿಗಳನ್ನು ಬದಲಾಯಿಸದ ಹೊರತು ಈ ದೇಶದಲ್ಲಿ ಮೀಸಲಾತಿ ಮತ್ತು ಜಾತಿ ಗಣತಿಯ ಅವಶ್ಯಕತೆ ಇರುತ್ತದೆ ಎಂದು ಅವರು ಹೇಳಿದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ರಾಮಚರಿತ ಮಾನಸ ಕುರಿತು ಸಚಿವ ಚಂದ್ರಶೇಖರ್ ನಿರಂತರವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದನ್ನು ನಿತೀಶ್ ಕುಮಾರ್ ಕೇಳುತ್ತಿಲ್ಲವೇ? ನಿತೀಶ್ ಕುಮಾರ್ ಅವರು ಸನಾತನ ಸಂಸ್ಥೆಯನ್ನು ನಿರಂತರವಾಗಿ ಅವಮಾನಿಸುತ್ತಿದ್ದಾರೆ. ಚಂದ್ರಶೇಖರ್ ಅವರಿಗೆ ಯಾವುದೇ ಸಮಸ್ಯೆ ಇದ್ದರೆ ಅವರು ಧರ್ಮ ಬದಲಿಸಲಿ ಎಂದು ಬಿಜೆಪಿ ವಕ್ತಾರ ನೀರಜ್ ಕುಮಾರ್ ಸಲಹೆ ನೀಡಿದ್ದಾರೆ.
ಲೋಕ ಜನಶಕ್ತಿ ಪಕ್ಷದ (ರಾಮ್ ವಿಲಾಸ್) ಮುಖ್ಯಸ್ಥ ಚಿರಾಗ್ ಪಾಸ್ವಾನ್ ಕೂಡ ಚಂದ್ರಶೇಖರ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಎಂದು ಹೇಳಿದ್ದಾರೆ. ಶಿಕ್ಷಣ ಸಚಿವರನ್ನು ವಜಾಗೊಳಿಸಬೇಕು. ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಹೊಸ ತಲೆಮಾರಿಗೆ ವಿಷ ಉಣಿಸುತ್ತಿದ್ದಾರೆ. ರಾಮಚರಿತಮಾನಸ ಪೊಟ್ಯಾಶಿಯಂ ಸೈನೈಡ್ ಎಂದು ಕರೆಯುವ ಮೂಲಕ ಹೊಸ ತಲೆಮಾರಿನ ಮನಸ್ಸಿಗೆ ವಿಷ ಉಣಿಸುತ್ತಿದ್ದಾರೆ ಎಂದು ಪಾಸ್ವಾನ್ ಹೇಳಿದ್ದಾರೆ.