ಉಡುಪಿ: ಸಂಘಟನೆಯ ಹೆಸರನ್ನು ದುರುಪಯೋಗಪಡಿಸಿಕೊಂಡು ರಾಜಕೀಯ ನಾಯಕರ, ಪಕ್ಷದ ಹೆಸರಿನಲ್ಲಿ ಹಣ ಮಾಡುವ ವ್ಯಕ್ತಿಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮವಾಗಬೇಕಿದೆ ಎಂದು ಮಾಜಿ ಸಚಿವ ವಿ.ಸುನಿಲ್ ಕುಮಾರ್ ಆಗ್ರಹಿಸಿದರು.
ಉದ್ಯಮಿ ಗೋವಿಂದ ಬಾಬು ಪೂಜಾರಿ ಎಂಬವರಿಗೆ ಚುನಾವಣೆಗೆ ಟಿಕೆಟ್ ಕೊಡಿಸುವ ನೆಪದಲ್ಲಿ ಕೋಟ್ಯಾಂತರ ರೂಪಾಯಿ ವಂಚಿಸಿ ಜೈಲುಪಾಲಾದ ಚೈತ್ರ ಕುಂದಾಪುರ ಕಾರ್ಕಳ ಶಾಸಕರ ಹೆಸರು ಪ್ರಸ್ತಾಪಿಸಿದ ಕುರಿತು ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಸುನಿಲ್ ಕುಮಾರ್, ಹಣ ವಂಚನೆಯಿಂದ ಬಂಧಿತರಾಗಿರುವ ಚೈತ್ರಾ ಕುಂದಾಪುರ ಯಾರೆನ್ನುವುದೇ ನನಗೆ ಗೊತ್ತಿಲ್ಲ, ಆಕೆಯ ಜತೆಗೆ ಸಭೆ ಸಮಾರಂಭಗಳಲ್ಲಿಯೂ ಮಾತನಾಡಿಲ್ಲ,ಈ ಪ್ರಕರಣದ ವಿಚಾರದಲ್ಲಿ ನಾನು ಯಾವುದೇ ತನಿಖೆ ಎದುರಿಸಲು ಸಿದ್ದನಿದ್ದೇನೆ ಎಂದು ಅವರು, ವಿನಾಕಾರಣ ರಾಜಕಾರಣಿಗಳ ಹೆಸರುಗಳನ್ನು ಪ್ರಸ್ತಾಪಿಸಿ ತನಿಖೆಯ ಹಾದಿ ದಿಕ್ಕುತಪ್ಪಿಸುವ ಈ ಪ್ರಕರಣದ ಆರೋಪಿಗಳ ವಿರುದ್ಧ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಜರುಗಿಸಬೇಕೆಂದು ಸುನಿಲ್ ಕುಮಾರ್ ಒತ್ತಾಯಿಸಿದರು.

ಬಿಜೆಪಿಯಲ್ಲಿ ಹಣದಿಂದ ಟಿಕೆಟ್ ಸಿಗುತ್ತದೆ ಎನ್ನುವುದು ಕೇವಲ ಭ್ರಮೆ ಅಷ್ಟೇ,ಹಣ ಕೊಟ್ಟು ಟಿಕೆಟ್ ಪಡೆಯುವುದಾದರೆ ನನಗೆ ನಾಲ್ಕು ಬಾರಿ ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಿರುತ್ತಿರಲಿಲ್ಲ.ಹಣಕೊಟ್ಟು ಟಿಕೆಟ್ ಪಡೆಯುವ ಸಂಸ್ಕೃತಿ ಬಿಜೆಪಿ ಪಕ್ಷದಲ್ಲಿಲ್ಲ ಎಂದು ಹೇಳಿದರು.
ರಾಜಕೀಯ ಪಕ್ಷಗಳ ಹಾಗೂ ರಾಜಕಾರಣಿಗಳ ಹೆಸರುಗಳನ್ನು ಹೇಳಿಕೊಂಡು ಹಣ ಮಾಡುವ ದಂಧೆಗೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕು ಇದು ಯಾವ ರಾಜಕೀಯ ಪಕ್ಷಗಳಿಗೂ ಶೋಭೆ ತರುವಂತಹದ್ದಲ್ಲ ಈ ಪ್ರಕರಣವು ಉಳಿದವರಿಗೂ ಪಾಠವಾಗಬೇಕಿದೆ ಎಂದು ಸುನಿಲ್ ಕುಮಾರ್ ಹೇಳಿದರು.

