ಕಾರ್ಕಳ:ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಆತ್ಮ ನಿರ್ಭರ ನಿಧಿ (ಪಿಎಂ ಸ್ವನಿಧಿ)ಯೋಜನೆಯಡಿಯಲ್ಲಿ ಹಾಲು ಮಾರಾಟ ಮತ್ತು ಹಂಚಿಕೆ ಮಾಡುವವರನ್ನು ಬೀದಿ ಬದಿ ವ್ಯಾಪಾರಿಗಳೆಂದು ಪರಿಗಣಿಸಿ ಈ ಯೋಜನೆಯ ವ್ಯಾಪ್ತಿಗೆ ತಂದಿರುವುದು ದೇಶದ ಕೋಟ್ಯಾಂತರ ಮಂದಿಗೆ ಜೀವನೋಪಾಯವಾಗಿರುವ ಮನೆಮನೆಗೆ ಹಾಲು ಹಾಕುವವರಿಗೆ ಆರ್ಥಿಕ ಚೈತನ್ಯವನ್ನು ನೀಡಿದಂತಾಗಿದೆ ಎಂದು ಸಹಕಾರ ಭಾರತಿ ರಾಜ್ಯ ಹಾಲು ಪ್ರಕೋಷ್ಟದ ಸಂಚಾಲಕರಾದ ಸಾಣೂರು ನರಸಿಂಹ ಕಾಮತ್ ಕೇಂದ್ರದ ನಿರ್ಧಾರವನ್ನು ಶ್ಲಾಘಿಸಿದ್ದಾರೆ.



ಕರ್ನಾಟಕ ಹಾಲು ಮಹಾ ಮಂಡಳಿ ವ್ಯಾಪ್ತಿಗೆ ಬರುವ ಎಲ್ಲಾ 15 ಒಕ್ಕೂಟಗಳ ಕೆಎಂಎಫ್ ಮಳಿಗೆಗಳು, ಫ್ರಾಂಚೈಸಿ, ಡೀಲರ್ ಗಳು, ನಂದಿನಿ ಹಾಲು ಮಾರಾಟಗಾರರು, ದಿನಂಪ್ರತಿ ಮನೆಮನೆಗೆ ಹಾಲು ವಿತರಿಸುವವರು ಕೆಎಂಎಫ್ ನಡಿ ನೋಂದಾಯಿಸಿ ಗುರುತು ಪತ್ರ ಪಡೆದಿರುವ ಅಂಶದ ಆಧಾರದ ಮೇಲೆ ನಗರ ಸ್ಥಳೀಯ ಸಂಸ್ಥೆಗಳು ಬೀದಿಬದಿ ವ್ಯಾಪಾರಿಗಳೆಂದು ಪರಿಗಣಿಸಿ ಈ ಯೋಜನೆಗೆ ಅರ್ಹ ಫಲಾನುಭವಿಗಳನ್ನು ಆಯ್ದುಕೊಳ್ಳುವ ಪ್ರಕ್ರಿಯೆಗೆ ಈಗಾಗಲೇ ರಾಜ್ಯ ಮಟ್ಟದಲ್ಲಿ ಚಾಲನೆ ದೊರೆತಿದೆ,ಕಡಿಮೆ ಬಡ್ಡಿ ದರದಲ್ಲಿ ,ತೀರ ಸರಳೀಕೃತ ನಿಬಂಧನೆಗೆ ಒಳಪಟ್ಟು ಹತ್ತಿರದ ಬ್ಯಾಂಕುಗಳಿಂದ ಈಗಾಗಲೇ ಬೀದಿಬದಿ ವ್ಯಾಪಾರಿಗಳಿಗೆ ಸಿಗುತ್ತಿರುವ ಈ ಕಿರುಸಾಲ ಸೌಲಭ್ಯದಿಂದಾಗಿ ಹಾಲು ವ್ಯಾಪಾರವನ್ನೇ ನಂಬಿಕೊಂಡು ಬದುಕುತ್ತಿರುವ ಎಲ್ಲಾ ಹಾಲು ಮಾರಾಟಗಾರರು ಮತ್ತು ವಿತರಕರ ಕುಟುಂಬಗಳ ಜೀವನ ಮಟ್ಟದಲ್ಲಿ ಸುಧಾರಣೆಯಾಗಲು ಸಾಧ್ಯವಿದೆ ಎಂದು ಈ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ





