ಬೆಂಗಳೂರು: ಎಂಎಲ್ಎ ಟಿಕೆಟ್ ಕೊಡಿಸುವುದಾಗಿ ಉದ್ಯಮಿ ಗೋವಿಂದ್ ಬಾಬು ಪೂಜಾರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಹಾಲಶ್ರೀ ಕೊನೆಗೆ ಸಿಕ್ಕಿದ್ದಿದ್ದಾನೆ.
ಚೈತ್ರಾ ಕುಂದಾಪುರ ಬಂಧನವಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಪ್ರಕರಣದ ಮೂರನೇ ಆರೋಪಿ ವಿಜಯನಗರ ಜಿಲ್ಲೆಯ ಅಭಿನವ ಹಾಲಶ್ರೀಯನ್ನು ಇಂದು (ಸೆಪ್ಟೆಂಬರ್ 19) ಒಡಿಶಾದ ಕಟಕ್ನಲ್ಲಿ ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಟಕ್ ಬಳಿ ರೈಲಿನಲ್ಲಿ ಭುವನೇಶ್ವರದಿಂದ ಬೋಧ್ಗಯಾಗೆ ತೆರಳುತ್ತಿದ್ದ ವೇಳೆ ಹಾಲಶ್ರೀಯನ್ನು ಸಿಸಿಬಿ ಪೊಲೀಸರು ಹಿಡಿದಿದ್ದಾರೆ.ಒಡಿಶಾ ಪೊಲೀಸರ ಸಹಕಾರದಿಂದ ಹಾಲಶ್ರೀಯನ್ನು ಬಂಧಿಸುವಲ್ಲಿ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಇಂದು (ಸೆಪ್ಟೆಂಬರ್ 19) ರಾತ್ರಿ ಬೆಂಗಳೂರಿಗೆ ಕರೆತರಲಿದ್ದಾರೆ.

ಚೈತ್ರಾ ಕುಂದಾಪುರ ಹೇಳಿದಂತೆ ವಿಚಾರಣೆ ವೇಳೆ ಸ್ವಾಮೀಜಿ ದೊಡ್ಡ ದೊಡ್ಡವರ ಹೆಸರು ಬಾಯ್ಬಿಡುತ್ತರಾ ಎನ್ನುವ ಕುತೂಹಲ ಮೂಡಿಸಿದೆ.ಚೈತ್ರಾ ಕುಂದಾಪುರ ಗ್ಯಾಂಗ್‌ನಿಂದ ವಂಚನೆ ಮಾಡಲಾದ 5 ಕೋಟಿ ರೂ. ಹಣದಲ್ಲಿ 1.5 ಕೋಟಿ ರೂ. ಹಣವನ್ನು ಈ ಅಭಿನವ ಹಾಲಶ್ರೀ ಸ್ವಾಮೀಜಿ ಪಡೆದುಕೊಂಡಿದ್ದಾರೆನ್ನಲ್ಲಾಗಿದೆ. ಈ ಪ್ರಕರಣದ ಹೊರಗೆ ಬರುತ್ತಿದ್ದಂತೆ ಹಾಲಶ್ರೀ ಸ್ವಾಮೀಜಿ ಅಜ್ಞಾತ ಸ್ಥಳಕ್ಕೆ ತೆರಳಿದ್ದರು. ಈ ಪ್ರಕರಣದ ಒಟ್ಟು 10 ಆರೋಪಿಗಳ ಪೈಕಿ 7 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅವರನ್ನು ಕೋರ್ಟ್ ನಿರ್ದೇಶದನದ ಮೇರೆಗೆ ವಿಚಾರಣೆ ಮಾಡಲಾಗುತ್ತದೆ. ಆದರೆ, ಪೊಲೀಸರ ಬಂಧನದಿಂದ ತಪ್ಪಿಸಿಕೊಂಡಿದ್ದ ಅಭಿನವ ಸ್ವಾಮೀಜಿ ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ಜಾಮೀನಿಗಾಗಿ ನ್ಯಾಯಾಲಯ ಮೊರೆ ಹೋಗಿದ್ದರು. ಆದರೆ, ಬೇಲ್ ನೀಡಲು ಕೋರ್ಟ್ ನಿರಾಕರಣೆ ಮಾಡಿತ್ತು.

ಇದಾದ ನಂತರ ಮೈಸೂರು, ಬೆಂಗಳೂರು, ವಿಜಯನಗರ ಜಿಲ್ಲೆಯ ಹಡಗಲಿ ಸೇರಿದಂತೆ ಎಲ್ಲೆಡೆ ಸ್ವಾಮೀಜಿಗಾಗಿ ಸಿಸಿಬಿ ಪೊಲೀಸರು ಶೋಧನೆ ಮಾಡಿದ್ದರು. ಕರ್ನಾಟಕದ ಮೈಸೂರಿಗೆ ಹೋಗಿದ್ದ ಸ್ವಾಮೀಜಿ ಅಲ್ಲಿಂದ ಕಾರಿನಲ್ಲಿ ಆಂಧ್ರಪ್ರದೇಶಕ್ಕೆ ತೆರಳಿದ್ದರು. ಅಲ್ಲಿನ ಹೈದರಾಬಾದ್ ವಿಮಾನ ನಿಲ್ದಾಣದಿಂದ ಓಡಿಶಾದ ಕಟಕ್‌ಗೆ ತೆರಳಿದ್ದರು, ಸ್ವಾಮೀಜಿ ಟೀಶರ್ಟ್ ಧರಿಸಿ ಸಾಮಾನ್ಯ ವ್ಯಕ್ತಿಯಂತೆ ರೈಲಿನಲ್ಲಿ ಬೇರೊಬ್ಬನ ಜೊತೆಗೆ ಪ್ರಯಾಣ ಮಾಡುತ್ತಿದ್ದರು. ಒಡಿಶಾದ ಪೊಲೀಸರ ಸಹಾಯದಿಂದ ಕರ್ನಾಟಕದ ಸಿಸಿಬಿ ಪೊಲೀಸರು ಸ್ವಾಮೀಜಿಯನ್ನು ಸಿನಿಮೀಯ ಶೈಲಿಯಲ್ಲಿ ಓಡಿಸಿಕೊಂಡು ಹೋಗಿ ಬಂಧಿಸಿದ್ದಾರೆ. ಇನ್ನು ಒಡಿಶಾದ ಕಟಕ್‌ನಿಂದ ಈಶಾನ್ಯ ರಾಜ್ಯಗಳಿಗೆ ಹೋಗುವ ರೈಲಿನಲ್ಲಿ ಸ್ವಾಮೀಜಿ ಬಂಧನವಾಗಿದ್ದು, ಮಧ್ಯಾಹ್ನ 1.30ರ ವಿಮಾನದಲ್ಲಿ ಬೆಂಗಳೂರಿಗೆ ಕರೆತರಲಿದ್ದಾರೆ.



















