ಬೆಂಗಳೂರು: ಶಾಲೆಗೆ ಹೋಗುವ ಮಕ್ಕಳೂ ಸಹ ಸಾಮಾಜಿಕ ಜಾಲತಾಣಗಳನ್ನು ಬೇಕಾಬಿಟ್ಟಿ ಬಳಸುತ್ತಿದ್ದ ಕಾರಣ ಮತದಾನಕ್ಕೆ 21 ವರ್ಷ ನಿಗದಿ ಮಾಡಿರುವ ಮಾದರಿಯಲ್ಲೇ ಸಾಮಾಜಿಕ ಜಾಲತಾಣ ಬಳಕೆಗೂ ವಯೋಮಿತಿ ನಿಗದಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.
ವೈಯಕ್ತಿಕ ಖಾತೆಗಳನ್ನು ನಿರ್ಬಂಧಿಸಿ 2021ರ ಫೆ.ಮತ್ತು 2022ರ ಅವಧಿಯಲ್ಲಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶಗಳನ್ನು ಆಕ್ಷೇಪಿಸಿ ಸಲ್ಲಿಸಿದ್ದ ತಕರಾರು ಅರ್ಜಿ ವಜಾಗೊಳಿಸಿದ್ದ ಹೈಕೋರ್ಟ್ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಎಕ್ಸ್ (ಹಿಂದಿನ ಟ್ವಿಟರ್) ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ನರೇಂದರ್ ಅವರ ನೇತೃತ್ವದ ವಿಭಾಗೀಯ ಪೀಠ ಈ ಸಲಹೆ ನೀಡಿದೆ.
ಆನ್‌ಲೈನ್ ಗೇಮಿಂಗ್‌ಗೆ ವಯೋಮಿತಿ ನಿಗದಿಪಡಿಸಲಾಗಿದೆ. ಅದೇ ರೀತಿ ಸಾಮಾಜಿಕ ಮಾಧ್ಯಮ ಬಳಕೆಗೂ ವಯೋಮಿತಿ ನಿಗದಿಪಡಿಸಬೇಕು ಎ೦ದು ನ್ಯಾಯಾಲಯ ಹೇಳಿದೆ.
ಈಗ ಎಲ್ಲದಕ್ಕೂ ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. 17 ಅಥವಾ 18 ವಯೋಮಿತಿಯ ಮಕ್ಕಳಿಗೆ ದೇಶದ ಹಿತಾಸಕ್ತಿಗೆ ಪೂರಕ ಯಾವುದು ಮಾರಕ ಯಾವುದು ಎಂಬುದನ್ನು ನಿರ್ಧರಿಸುವ ಪ್ರೌಢಿಮೆ ಇದೆಯೇ? ಮತದಾನಕ್ಕೆ ಕನಿಷ್ಠ 21 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಅದೇ ಮಾದರಿಯಲ್ಲಿ ಸಾಮಾಜಿಕ ಮಾಧ್ಯಮ ಬಳಕೆ ಮಾಡಲು ಕನಿಷ್ಠ 21 ವರ್ಷ ವಯಸ್ಸಾಗಿರಬೇಕು ಎಂದು ವಯೋಮಿತಿ ನಿಗದಿಪಡಿಸುವುದು ಒಳಿತು ಎಂದು ನ್ಯಾಯಪೀಠ ಹೇಳಿದೆ.
ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 69A ಅಡಿಯಲ್ಲಿ ಫೆಬ್ರವರಿ 2, 2021 ಮತ್ತು ಫೆಬ್ರವರಿ 28, 2022 ರ ನಡುವೆ 1,474 ಖಾತೆಗಳು, 175 ಟ್ವೀಟ್‌ಗಳು, 256 URL ಗಳು ಮತ್ತು ಒಂದು ಹ್ಯಾಶ್‌ಟ್ಯಾಗ್ ಅನ್ನು ನಿರ್ಬಂಧಿಸುವಂತೆ ಸರ್ಕಾರ 10 ಆದೇಶಗಳನ್ನು ಹೊರಡಿಸಿದೆ.























