Share this news

ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಹಾಕುವ ಉದ್ದೇಶದಿಂದ ರಾಜ್ಯದಲ್ಲಿನ ಪ್ರತಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ನಡುವೆ ಮೈತ್ರಿ ಪ್ರಕ್ರಿಯೆ ಇದೀಗ ನಿರ್ಣಾಯಕ ಹಂತಕ್ಕೆ ತಲುಪಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಬಿಜೆಪಿ ವರಿಷ್ಠರೊಂದಿಗೆ ಮಾತುಕತೆ ನಡೆಸುವ ಸಲುವಾಗಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ದೆಹಲಿಗೆ ತೆರಳಲಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರೊಂದಿಗೆ ಸಮಾಲೋಚನೆ ನಡೆಸುವ ನಿರೀಕ್ಷೆಯಿದೆ.

ಈಗಾಗಲೇ ಹಲವು ದಿನಗಳ ಹಿಂದೆಯೇ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ವೇಳೆ ಉಭಯ ಪಕ್ಷಗಳ ನಡುವೆ ಮೈತ್ರಿ ಕುರಿತಂತೆ ತಾತ್ವಿಕವಾಗಿ ಮಾತುಕತೆ ನಡೆಸಿದ್ದರು. ಇದೀಗ ಅದರ ಮುಂದಿನ ಹಂತದ ಮಾತುಕತೆಯನ್ನು ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಂದಿಗೆ ನಡೆಸಲಿದ್ದಾರೆ. ಈಗಾಗಲೇ ಸಂಸತ್ ಅಧಿವೇಶನ ಹಿನ್ನೆಲೆ ದೇವೇಗೌಡರು ದೆಹಲಿಯಲ್ಲಿದ್ದಾರೆ. ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರೂ ಪುತ್ರನ ಸಂಸತ್‌ ಸದಸ್ಯತ್ವ ಕುರಿತಾದ ಕಾನೂನು ಸಮರದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ತಂಗಿದ್ದಾರೆ. ಹೀಗಾಗಿ, ಕುಮಾರಸ್ವಾಮಿ ಅವರು ಬಿಜೆಪಿ ನಾಯಕರೊಂದಿಗೆ ಮಾತುಕತೆ ನಡೆಸಿ ಮೈತ್ರಿ ಪ್ರಕ್ರಿಯೆ ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ತಿಳಿದು ಬಂದಿದೆ.

ಆದರೆ, ಈ ಭೇಟಿಯ ವೇಳೆಯೇ ಮೈತ್ರಿ ಮಾತುಕತೆ ಅಂತಿಮಗೊಳ್ಳುತ್ತದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕುಮಾರಸ್ವಾಮಿ ಅವರೊಂದಿಗಿನ ಮಾತುಕತೆ ಬಳಿಕ ಬಿಜೆಪಿ ರಾಷ್ಟ್ರೀಯ ನಾಯಕರು ರಾಜ್ಯದ ಹಿರಿಯ ನಾಯಕರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿ ಅಂತಿಮ ನಿರ್ಣಯ ಕೈಗೊಳ್ಳಬಹುದು.
ಈವರೆಗೆ ಬಿಜೆಪಿ ರಾಷ್ಟ್ರೀಯ ನಾಯಕರು ಜೆಡಿಎಸ್‌ ಜತೆಗಿನ ಮೈತ್ರಿ ಕುರಿತಂತೆ ರಾಜ್ಯ ನಾಯಕರೊಂದಿಗೆ ಪ್ರಸ್ತಾಪವನ್ನೇ ಮಾಡಿಲ್ಲ. ಇದನ್ನು ಬಿಜೆಪಿ ರಾಜ್ಯ ನಾಯಕರು ಅಧಿಕೃತವಾಗಿಯೇ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ, ಈಗ ರಾಜ್ಯ ನಾಯಕರನ್ನು ಹೊರಗಿಟ್ಟು ಮಾತುಕತೆ ಪ್ರಕ್ರಿಯೆ ಅಂತಿಮಗೊಳಿಸಿದಲ್ಲಿ ಅದು ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆಯ ಕುರಿತು ಆತಂಕ ರಾಷ್ಟ್ರೀಯ ನಾಯಕರಿಗೆ ಇದ್ದೇ ಇದೆ.

4-5 ಸ್ಥಾನಕ್ಕೆ ಜೆಡಿಎಸ್‌ ಪಟ್ಟು ಸಂಭವ:
ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ನಾಲ್ಕರಿಂದ ಐದು ಸ್ಥಾನಗಳನ್ನು ತಮಗೆ ಬಿಟ್ಟು ಕೊಡಬೇಕು ಎಂಬ ಬೇಡಿಕೆಯನ್ನು ಜೆಡಿಎಸ್ ನಾಯಕರು ಮುಂದಿಡುವ ಸಾಧ್ಯತೆಯಿದೆ. ಅದರಲ್ಲಿ ಎರಡು ಅಥವಾ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಹಾಲಿ ಸಂಸದರೇ ಇರುವ ಕ್ಷೇತ್ರಗಳೂ ಇರುವ ಸಂಭವವಿದೆ. ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸುವ ವೇಳೆ ಅಮಿತ್ ಶಾ ಮತ್ತು ನಡ್ಡಾ ಅವರು ತಮ್ಮ ಪಕ್ಷದ ನಿಲುವನ್ನು ತಿಳಿಸಬಹುದು. ಅದಕ್ಕೆ ಕುಮಾರಸ್ವಾಮಿ ಒಪ್ಪಿದಲ್ಲಿ ಪ್ರಕ್ರಿಯೆ ಸುಲಭವಾಗಿ ಆಗಬಹುದು. ಇಲ್ಲದಿದ್ದರೆ ಇನ್ನೂ ಕೆಲದಿನಗಳ ಕಾಲ ಮುಂದುವರೆಯಬಹುದು ಎಂದು ಉನ್ನತ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *