ನವದೆಹಲಿ : ದೇಶದ ವೈದ್ಯಕೀಯ ಪದವೀಧರರಿಗೆ ಜಾಗತಿಕ ಮನ್ನಣೆ ದೊರೆತಿದ್ದು, ಇನ್ನುಮುಂದೆ ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್‌ನಂತಹ ದೇಶಗಳಲ್ಲಿ ತಮ್ಮ ಸ್ನಾತಕೋತ್ತರ ತರಬೇತಿ (ಟ್ರೈನಿಂಗ್) ಮತ್ತು ವೃತ್ತಿಯನ್ನು ಮಾಡಬಹುದು ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ಭಾರತೀಯ ರಾಷ್ಟ್ರೀಯ ವೈದ್ಯಕೀಯ ಆಯೋಗ (ಎನ್‌ಎಂಸಿ)ಯು ಜಾಗತಿಕ ವೈದ್ಯಕೀಯ ಶಿಕ್ಷಣ ಸಂಸ್ಥೆ (ಡಬ್ಲೂಎಫ್‌ಎಂಇ)ಯಿಂದ 10 ವರ್ಷಗಳ ಅವಧಿಗೆ ವೈದ್ಯಕೀಯ ಶಿಕ್ಷಣದ ಮಾನ್ಯತೆಯನ್ನು ಪಡೆದುಕೊಂಡಿದೆ. ಹೀಗಾಗಿ ಈ ಮೇಲಿನ ದೇಶಗಳು ಡಬ್ಲೂಎಫ್‌ಎಂಇ ಮಾನ್ಯತೆ ಪಡೆದಿವೆ. ಆದ್ದರಿಂದ ಇಲ್ಲಿಯೂ ಭಾರತದ ವೈದ್ಯಕೀಯ ಪದವೀಧರರು ಟ್ರೈನಿಂಗ್ ಪಡೆದುಕೊಳ್ಳಬಹುದಾಗಿದೆ.
ಎಲ್ಲಾ 706 ವೈದ್ಯಕೀಯ ಕಾಲೇಜುಗಳು ಹಾಗೂ ಮುಂಬರುವ 10 ವರ್ಷಗಳಲ್ಲಿ ಸ್ಥಾಪಿತವಾಗುವ ಎಲ್ಲ ವೈದ್ಯಕೀಯ ಕಾಲೇಜುಗಳು ನೇರವಾಗಿ ಡಬ್ಲೂಎಫ್‌ಎಂಇ ಮಾನ್ಯತೆ ಪಡೆದುಕೊಳ್ಳುತ್ತವೆ.
ಡಬ್ಲೂಎಫ್‌ಎಂಇ ಮಾನ್ಯತೆ ಪಡೆಯಬೇಕಾದರೆ ದೇಶದ ಪ್ರತಿ ವೈದ್ಯಕೀಯ ಕಾಲೇಜಿಗೆ 49 ಲಕ್ಷ ರು. ಶುಲ್ಕ ನೀಡಬೇಕಾಗುತ್ತದೆ. ಅಂತೆಯೇ ತನ್ನ 706 ಕಾಲೇಜುಗಳಿಗಾಗಿ ಭಾರತ ಒಟ್ಟು 351.9 ಕೋಟಿ ರು. ಶುಲ್ಕ ನೀಡಿದೆ.
ಜಾಗತಿಕ ಮಾನ್ಯತೆಯಿಂದಾಗಿ ವಿಶ್ವದ ಇತರ ವಿದ್ಯಾರ್ಥಿಗಳೂ ಭಾರತದೆಡೆಗೆ ಆಕರ್ಷಿತರಾಗುತ್ತಾರೆ. ಅಲ್ಲದೇ ದೇಶದ ಮನ್ನಣೆ ಹಾಗೂ ಶಿಕ್ಷಣದಲ್ಲಿ ಉತ್ತಮ ಬೆಳವಣಿಗೆಗಳು ನಡೆಯುತ್ತವೆ.