ಕಾರ್ಕಳ: ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಆಮಿಷವೊಡ್ಡಿ ಜನರನ್ನು ದಾರಿತಪ್ಪಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಆರ್ಥಿಕ ಚಟುವಟಿಕೆಗಳ ಮೇಲೂ ನಿರ್ಬಂಧ ಹೇರುವ ಮೂಲಕ ಬಡವರ, ಕೂಲಿ ಕಾರ್ಮಿಕರ ಬದುಕಿಗೆ ಬರೆ ಎಳೆಯಲು ಮುಂದಾಗಿರುವುದು ಖಂಡನೀಯ.
ಕಾಂಗ್ರೆಸ್ ಸರ್ಕಾರ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದ್ದ ಉಚಿತ ವಿದ್ಯುತ್ ಯೋಜನೆಯ ನೆಪದಲ್ಲಿ ಕೈಗಾರಿಕೆ ಹಾಗೂ ವಾಣಿಜ್ಯ ಬಳಕೆಯ ವಿದ್ಯುತ್ ದರವನ್ನು ಏಕಾಎಕಿ ಏರಿಸಿದ್ದ ಹಿನ್ನಲೆಯಲ್ಲಿ ಸಣ್ಣಪುಟ್ಟ ಕೈಗಾರಿಕೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಯಿತು. ಅದನ್ನೇ ನಂಬಿ ಸಾಲ ಮಾಡಿ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದವರ ಬದುಕು ಬೀದಿಗೆ ಬಂದಿದೆ. ಇಂತಹ ಉದ್ಯಮಗಳನ್ನೇ ನಂಬಿದ್ದ ಕಾರ್ಮಿಕರು ಕೂಡ ಸಂಕಷ್ಟಕ್ಕೀಡಾಗಿದ್ದಾರೆ.
ಇದೀಗ ಕರಾವಳಿ ಜಿಲ್ಲೆಗಳಲ್ಲಿ ಕಲ್ಲು, ಮರಳು, ಮಣ್ಣು, ಕೆಂಪು ಕಲ್ಲು ಸಾಗಾಟಕ್ಕೂ ನಿರ್ಬಂಧ ಹೇರಿದ್ದು ಇದರಿಂದ ಕಟ್ಟಡ ನಿರ್ಮಾಣ ಕಾಮಗಾರಿ ಸೇರಿದಂತೆ ಎಲ್ಲವೂ ಸ್ಥಗಿತಗೊಂಡಿದೆ. ಬಹುತೇಕ ಕಟ್ಟಡ ಕಾರ್ಮಿಕರ ಕುಟುಂಬಗಳು ಇದನ್ನೇ ನಂಬಿ ಜೀವನ ನಡೆಸುತ್ತಿದ್ದು, ಪ್ರಸ್ತುತ ಕಾಮಗಾರಿಗಳು ಏಕಾಎಕಿ ನಿಂತಿರುವುದರಿಂದ ಸಾವಿರಾರು ಕಾರ್ಮಿಕರು ಕೆಲಸವಿಲ್ಲದೇ ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಟ್ಟಡ ನಿರ್ಮಾಣ ಸಾಮಗ್ರಿಗಳು ಮತ್ತು ಕಾಮಗಾರಿಗಳು ಆರ್ಥಿಕ ಚಟುವಟಿಕೆಗಳ ಕೊಂಡಿಯಾಗಿದ್ದು, ಇದೀಗ ನಿರ್ಮಾಣ ಕಾಮಗಾರಿಯ ವಲಯವೇ ಸ್ಥಗಿತಗೊಂಡಿದ್ದು ಇದರಿಂದ ಹೋಟೇಲ್ ಉದ್ಯಮ, ದಿನಸಿ ವ್ಯಾಪಾರ ಜತೆಗೆ ದೈನಂದಿನ ಮಾರುಕಟ್ಟೆಯ ವ್ಯವಹಾರಕ್ಕೂ ತೀವ್ರ ಹೊಡೆತ ಬಿದ್ದಿದೆ.
ಕಳೆದ ಹತ್ತಾರು ವರ್ಷಗಳಿಂದ ಮಾಡುತ್ತಿರುವ ವ್ಯವಹಾರ ಏಕಾಏಕಿ ಸ್ಥಗಿತಗೊಳಿಸಿದರೆ ಜನ ಬೀದಿ ಪಾಲಾಗಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಇವುಗಳನ್ನು ಕಾನೂನುಬದ್ಧಗೊಳಿಸುವುದಕ್ಕೂ ಕಾಲಾವಕಾಶ ಬೇಕಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಕಾಲಾವಕಾಶ ಕೊಟ್ಟು ತಪ್ಪಿದಲ್ಲಿ ಕ್ರಮಕೈಗೊಳ್ಳಬೇಕು ಇಲ್ಲವಾದಲ್ಲಿ ಕೂಲಿಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸುತ್ತಾರೆ ಎಂದು ಎಚ್ಚರಿಸಿದ್ದಾರೆ.
ಇದಲ್ಲದೇ ಸರಕು ಸಾಗಾಟ ವಾಹನಗಳ ಮೇಲಿನ ತೆರಿಗೆಯನ್ನು ದುಪ್ಪಟ್ಟು ಮಾಡುವ ಮೂಲಕ ಬಡ ವಾಹನ ಮಾಲಕರ ಬದುಕಿನ ಮೇಲೆ ಬರೆ ಎಳೆದಿದೆ.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಜನರ ಬದುಕಿಗೆ ತೊಂದರೆಯಾಗುವ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಆದರೆ ಕಾಂಗ್ರೆಸ್ ಸರ್ಕಾರ ಅಧಿಕಾರದ ಆಸೆಯಿಂದ ಜನರಿಂದ ಹಗಲು ದರೋಡೆಗೆ ಇಳಿದಿದ್ದು ಪ್ರಕರಣವನ್ನು ತುರ್ತಾಗಿ ಪರಿಹರಿಸದೆ ಇದ್ದರೆ ಲಾರಿ ಟೆಂಪೋ ಮಾಲಕರೊಂದಿಗೆ ಸೇರಿ ಹೋರಾಟವನ್ನು ಮಾಡಬೇಕಾಗುತ್ತದೆ. ಎಂದು ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ್ ಹೆಗ್ಡೆ ಮತ್ತು ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಎಚ್ಚರಿಸಿದ್ದಾರೆ.