ರಾಮನಗರ :ಸಾರ್ವಜನಿಕರಿಗೆ ಹಾಗೂ ಬಡರೋಗಿಗಳಿಗೆ ಸಕಾಲದಲ್ಲಿ ಚಿಕಿತ್ಸೆ ಸಿಗುವಂತಾಗಬೇಕು, ಆಸ್ಪತ್ರೆಗಳಲ್ಲಿ ಸಿಬ್ಬಂದಿ ಕೊರತೆಯಿದ್ದು ಇದನ್ನು ನಿವಾರಿಸುವ ನಿಟ್ಟಿನಲ್ಲಿ ರಾಜ್ಯದಾದ್ಯಂತ 780 ವೈದ್ಯರನ್ನು ಶೀಘ್ರದಲ್ಲೇ ನೇಮಕಾತಿ ಮಾಡಿಕೊಳ್ಳಲಾಗುವುದೆಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಅವರು ರಾಮನಗರದ ಜಿಲ್ಲಾಸ್ಪತ್ರೆಯಲ್ಲಿ ಸ್ವಚ್ಛ ಆಸ್ಪತ್ರೆ – ನಮ್ಮ ಆದ್ಯತೆ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿ,ಆರಂಭಿಕ ಹಂತದಲ್ಲಿ ವೈದ್ಯರ ನೇಮಕ ನಡೆಯಲಿವೆ ಎಂದರು. ಜಿಲ್ಲಾಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ತಜ್ಞ ವೈದ್ಯರು, ಶುಶ್ರೂಷಕಿರು, ಗ್ರೂಪ್ ಡಿ,ಹಾಗೂ ನರ್ಸ್ ಗಳ ಕೊರತೆ ಇದೆ. ಇಲ್ಲಿ ಆಸ್ಪತ್ರೆ ದೊಡ್ಡದಿದ್ದರೂ, ಸಿಬ್ಬಂದಿಗಳಿಲ್ಲ. ಕಡ್ಡಾಯವಾಗಿ ಗ್ರಾಮೀಣ ಸೇವೆಯಲ್ಲಿನ ವೈದ್ಯರನ್ನು ಸೇವೆಗೆ ನೇಮಕ ಮಾಡಿಕೊಳ್ಳಲಾಗುವುದು ಎಂದರು.
ಪಿಸಿಪಿಎನ್ ಡಿಟಿ ಆಕ್ಟ್ ಬಗ್ಗೆ ಕಟ್ಟುನಿಟ್ಟಿನ ಸೂಚನೆ ಇದೆ. ಸೆಕ್ಸ್ ರೇಷಿಯೋ ಕಡಿಮೆ ಇದೆ. ಲಿಂಗ ಪತ್ತೆಗೆ ಅವಕಾಶ ಇಲ್ಲ. ಲಿಂಗ ಪತ್ತೆ ನಡೆಸುವ ಆಸ್ಪತ್ರೆಗಳ ಮೇಲೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆ ಸ್ವಚ್ಛತೆ ಬಗ್ಗೆ ಪರಿಶೀಲನೆ ನಡೆಸಿದ್ದೇವೆ. ನೈರ್ಮಲ್ಯ ಉದ್ದೇಶ ನಮ್ಮದು. ಆಸ್ಪತ್ರೆಯಲ್ಲಿ ಸ್ವಚ್ಛತೆಯಿಲ್ಲದೇ ಸಾರ್ವಜನಿಕರಿಗೆ ಇರುಸು ಮುರುಸು ಉಂಟಾಗಬಾರದು. ಹಳೆ ಪರಿಕರಗಳನ್ನು ಸರಿಪಡಿಸುವ ಕೆಲಸ ಮಾಡುತ್ತೇವೆ. ಆಸ್ಪತ್ರೆಯ ತ್ಯಾಜ್ಯ ವಿಲೇ ಬಗ್ಗೆಯು ಕಾಳಜಿ ವಹಿಸಿದ್ದೇವೆ ಎಂದರು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿಯು ಸಿಬ್ಬಂದಿ ಕೊರತೆ ಇದೆ. ಇದರಿಂದ ಸೇವೆಗಳು ವ್ಯತ್ಯಯಗೊಂಡಿವೆ. ಹೀಗಾಗಿ ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಕೆಲಸ ಮಾಡಲಾಗುವುದು ಎಂದು ದಿನೇಶ್ ಗುಂಡೂರಾವ್ ಹೇಳಿದರು.