ಬೆಂಗಳೂರು : ರಾಜ್ಯದಲ್ಲಿ ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ಖಂಡಿಸಿ ಇಂದು (ಸೆ.29) ಬಂದ್ ಆಚರಿಸಲಾಗುತ್ತಿದೆ.ಇಂದಿನ ಬಂದ್ ಗೆ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಕೂಡ ಬೆಂಬಲ ಸೂಚಿಸಿದ್ದು, ಬಂದ್ ತೀವೃತೆ ಹೆಚ್ಚಿದೆ.
ಕಾವೇರಿ ಹೋರಾಟಕ್ಕೆ ಬೆಂಬಲ ಸೂಚಿಸಿ ಕನ್ನಡ ಪರ ಸಂಘಟನೆಗಳು, ರೈತ ಸಂಘಟನೆಗಳ ಪ್ರಮುಖರು ಚಾಮರಾಜನಗರದಲ್ಲಿ ಉರುಳು ಸೇವೆ ನಡೆಸಿದರು, ರಾಷ್ಟ್ರೀಯ ಹೆದ್ದಾರಿಯಲ್ಲಿ ತಮಟೆ ಚಳವಳಿ ನಡೆಸಿ ಸರ್ಕಾರದ ವಿರುದ್ದ ಘೋಷಣೆ ಕೂಗಿದರು. ಕನ್ನಡ ಹೋರಾಟಗಾರ ಚಾ.ರಂ,ಶ್ರೀನಿವಾಸಗೌಡ, ರೈತ ಮುಖಂಡ ಹಳ್ಳಿಕೆರೆ ಹುಂಡಿ ಭಾಗ್ಯರಾಜ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ.
ಕರ್ನಾಟಕ ಬಂದ್ ಕಾರಣದಿಂದ ಬೆಂಗಳೂರಿನಿಂದ ಸಂಚರಿಸುವ ಹಾಗೂ ಆಗಮಿಸುವ ವಿಮಾನಗಳ ಸಂಚಾರ ರದ್ದಾಗಿದೆ.ದೇವನಹಳ್ಳಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಹಾಗೂ ಆಗಮಿಸುವುದೂ ಸೇರಿ 44 ವಿಮಾನಗಳ ಸಂಚಾರ ರದ್ದಾಗಿದೆ. ಇದರಲ್ಲಿ ದೆಹಲಿ, ಮುಂಬೈ, ಕೋಲ್ಕತ್ತಾದ ವಿಮಾನಗಳೂ ಸೇರಿವೆ ಎಂದು ಮೂಲಗಳು ತಿಳಿಸಿವೆ.
ಬಂದ್ ಹಿನ್ನೆಲೆಯಲ್ಲಿ ಪೊಲೀಸರು ರಾಜ್ಯಾದ್ಯಂತ ಕಟ್ಟೆಚ್ಚರ ವಹಿಸಿದ್ದಾರೆ. ಬೆಂಗಳೂರಿನಲ್ಲಿ ಮಧ್ಯರಾತ್ರಿವರೆಗೆ ಸೆಕ್ಷನ್ 144 ವಿಧಿಸಲಾಗಿದ್ದು, ಬಲವಂತದ ಬಂದ್ ಮಾಡುವಂತಿಲ್ಲ, ಅಂಗಡಿ ಮುಂಗಟ್ಟುಗಳನ್ನು ಮುಚ್ಚುವಂತಿಲ್ಲ, ವಾಹನ ತಡೆಯುವಂತಿಲ್ಲ ಎಂದು ಆಯುಕ್ತರು ಎಚ್ಚರಿಸಿದ್ದಾರೆ.
ಇಂದಿನ ಕರ್ನಾಟಕ ಬಂದ್ ಗೆ ಓಲಾ ಊಬರ್ ಮತ್ತು ಹೋಟೆಲ್ ಸಂಘಟನೆಗಳು ಬೆಂಬಲ ಸೂಚಿಸಿವೆ. ಹೀಗಾಗಿ ಓಲಾ ಉಬರ್ ಟ್ಯಾಕ್ಸಿಗಳು ರಸ್ತೆಗಳಿದಿಲ್ಲ. ಹೋಟೆಲ್ ಗಳು ತೆರೆದಿಲ್ಲ .ಚಿತ್ರರಂಗ ಕೂಡ ಬಂದ್ ಗೆ ಬೆಂಬಲ ನೀಡಿದ್ದು ಸಂಜೆ 6 ಗಂಟೆಯ ವರೆಗೆ ಯಾವುದೇ ಚಿತ್ರ ಪ್ರದರ್ಶನ ಇರುವುದಿಲ್ಲ.
ಕರುನಾಡ ಕಾರ್ಮಿಕ ಸಂಘಟನೆ ಯವರುವಕೆಆರ್ ಮಾರುಕಟ್ಟೆಯಲ್ಲಿ ಕಿವಿಗೆ ಚೆಂಡು ಹಾಕಿಕೊಂಡು, ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ವಿಭಿನ್ನ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರನ್ನು ಹೊರಗೆ ಕಳುಹಿಸಿದರು. ಮುಂಜಾಗ್ರತಾ ಕ್ರಮವಾಗಿ ಕೆಲ ರೌಡಿಶೀಟರ್ ಗಳು ಸೇರಿದಂತೆ 150 ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 2016 ರಲ್ಲಿ ಕಾವೇರಿ ನೀರಿಗಾಗಿ ಕರೆ ನೀಡಿದ್ದ ವೇಳೆ ಕಲ್ಲು ತೂರಿ ಬೆಂಕಿ ಹಚ್ಚಿದ್ದ ಹಲವು ರೌಡಿಶೀಟರ್ ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇನ್ನು ಕರಾವಳಿಯಲ್ಲಿ ನೈತಿಕ ಬೆಂಬಲ ಮಾತ್ರ ವ್ಯಕ್ತವಾಗಿದ್ದು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಖಾಸಗಿ ಬಸ್ ಸಂಚಾರ ಎಂದಿನಂತಿದೆ. ಶಾಲಾ-ಕಾಲೇಜುಗಳು, ಹೋಟೆಲ್, ಅಂಗಡಿ ಮುಂಗಟ್ಟುಗಳು ಕೂಡ ತೆರೆದಿವೆ.