Share this news

ನವದೆಹಲಿ: 2,000ರೂ. ಮುಖಬೆಲೆಯ ನೋಟುಗಳನ್ನು ಬ್ಯಾಂಕುಗಳಲ್ಲಿ ವಿನಿಮಯ ಮಾಡಿಕೊಳ್ಳಲು ಅಥವಾ ಠೇವಣಿಯಿಡಲು ನಾಳೆ (ಸೆ.30) ಅಂತಿಮ ದಿನವಾಗಿದ್ದು, ಗಡುವನ್ನು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ವಿಸ್ತರಿಸುವ ಸಾಧ್ಯತೆಯಿದೆ. ಈ ನೋಟುಗಳನ್ನು ಬ್ಯಾಂಕುಗಳಿಗೆ ಹಿಂತಿರುಗಿಸಲು ಅಕ್ಟೋಬರ್ ಕೊನೆಯ ತನಕ ಕಾಲಾವಕಾಶ ನೀಡುವ ಸಾಧ್ಯತೆಯಿದೆ ಎಂದು ವರದಿಗಳು ತಿಳಿಸಿವೆ. ನೋಟುಗಳು ಪೂರ್ಣ ಪ್ರಮಾಣದಲ್ಲಿ ಇನ್ನೂ ಬ್ಯಾಂಕುಗಳಿಗೆ ಹಿಂತಿರುಗಿಲ್ಲ. ಹೀಗಾಗಿ ಶೇ.100ರಷ್ಟು 2,000ರೂ. ನೋಟುಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಆರ್ ಬಿಐ ಈ ನೋಟುಗಳ ವಿನಿಮಯಕ್ಕೆ ಇನ್ನಷ್ಟು ಕಾಲಾವಕಾಶ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.

ಚಲಾವಣೆಯಿಂದ 2 ಸಾವಿರ ರೂಪಾಯಿ ನೋಟುಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರ ಕೈಗೊಂಡ ಬಳಿಕ ಆಗಸ್ಟ್ 31ರ ತನಕ ಶೇ.93ರಷ್ಟು ನೋಟುಗಳು ವಾಪಸ್ ಆಗಿವೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಇನ್ನು 24,000 ಕೋಟಿ ಮೌಲ್ಯದ 2 ಸಾವಿರ ರೂ. ನೋಟುಗಳು ಚಲಾವಣೆಯಲ್ಲಿವೆ ಎಂಬ ಮಾಹಿತಿಯನ್ನು ಕೂಡ ನೀಡಿದೆ. ಬ್ಯಾಂಕ್ ಗಳಿಂದ ಪಡೆದಿರುವ ಮಾಹಿತಿ ಅನ್ವಯ ಆಗಸ್ಟ್ 31, 2023ರ ತನಕ ಚಲಾವಣೆಯಲ್ಲಿದ್ದ 3.32 ಲಕ್ಷ ಕೋಟಿ ರೂ. ಮೌಲ್ಯದ 2 ಸಾವಿರ ರೂಪಾಯಿ ನೋಟುಗಳನ್ನು ವಾಪಸ್ ಪಡೆಯಲಾಗಿದೆ.

‘ಯಾರಿಗೆ 2 ಸಾವಿರ ರೂ. ನೋಟನ್ನು ವಿನಿಮಯ ಮಾಡಿಕೊಳ್ಳಲು ಈ ತನಕ ಸಾಧ್ಯವಾಗಿಲ್ಲವೋ ಅಂಥವರಿಗೆ ಆರ್ ಬಿಐ ಇನ್ನೊಂದು ಅವಕಾಶ ನೀಡಲು ಮುಂದಾಗಿದೆ. ನೋಟು ವಿನಿಮಯಕ್ಕೆ ಅವಕಾಶ ನೀಡುವ ಸಂದರ್ಭದಲ್ಲಿ ಕೆಲವರು ವಿದೇಶದಲ್ಲಿದ್ದರು. ಇನ್ನೂ ಕೆಲವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಇಂಥವರಿಗೆ ನೋಟುಗಳ ವಿನಿಮಯಕ್ಕೆ ವಿಶೇಷ ಅವಕಾಶ ನೀಡಬಹುದು’ ಎಂದು ಸೌತ್ ಇಂಡಿಯನ್ ಬ್ಯಾಂಕ್ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚಲಾವಣೆಯಲ್ಲಿರುವ 2,000ರೂ. ನೋಟುಗಳನ್ನು ವಿತ್ ಡ್ರಾ ಮಾಡುವ ನಿರ್ಧಾರವನ್ನು ಆರ್ ಬಿಐ ಮೇ 19ರಂದೇ ಪ್ರಕಟಿಸಿತ್ತು. ಆದರೆ, ಸಾರ್ವಜನಿಕರಿಗೆ ಬ್ಯಾಂಕ್ ಗಳಲ್ಲಿ ಠೇವಣಿಯಿಡಲು ಅಥವಾ ವಿನಿಮಯ ಮಾಡಲು ಸೆಪ್ಟೆಂಬರ್ 30ರ ತನಕ ನಾಲ್ಕು ತಿಂಗಳ ಕಾಲಾವಕಾಶ ನೀಡಿತ್ತು.

 

 

 

 

 

Leave a Reply

Your email address will not be published. Required fields are marked *