ನವದೆಹಲಿ: ಈ ಹಿಂದೆ ನಡೆದ ಜಕಾರ್ತಾ ಏಷ್ಯನ್ ಗೇಮ್ಸ್ನಲ್ಲಿ 70 ಪದಕಗಳನ್ನು ಗೆಲ್ಲುವ ಮೂಲಕ ಭಾರತ ಈ ಕ್ರೀಡಾಕೂಟದಲ್ಲಿ ಅಧಿಕ ಪದಕ ಗೆದ್ದ ದಾಖಲೆ ಬರೆದಿತ್ತು. ಈ ಬಾರಿ ಚೀನಾದಲ್ಲಿ ನಡೆಯುತ್ತಿರುವ ಈ ಕ್ರೀಡಾಕೂಟದಲ್ಲಿ 100 ಪದಕ ಗೆಲ್ಲುವುದು ಭಾರತದ ಗುರಿಯಾಗಿದೆ. ಈ ವರ್ಷದ ಏಷ್ಯನ್ ಗೇಮ್ಸ್ನಲ್ಲಿ ಭಾರತೀಯ ಶೂಟರ್‌ಗಳು ಅತ್ಯಂತ ಗಮನಾರ್ಹ ಪ್ರದರ್ಶನ ನೀಡುತ್ತಿದ್ದು, ಕ್ರೀಡಾಕೂಟದ 8ನೇ ದಿನವೂ ತಮ್ಮ ಪದಕಗಳ ಬೇಟೆಯನ್ನು ಮುಂದುವರೆಸಿದ್ದಾರೆ. ಇಂದು ಬೆಳಗ್ಗೆ ನಡೆದ 50 ಮೀಟರ್ ಟ್ರ‍್ಯಾಪ್ ಟೀಮ್ ಸ್ಪರ್ಧೆಯಲ್ಲಿ ಭಾರತದ ವನಿತಾ ಪಡೆ ಬೆಳ್ಳಿ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಭಾರತದ ರಾಜೇಶ್ವರಿ ಕುಮಾರಿ , ಮನೀಶಾ ಕೀರ್, ಪ್ರೀತಿ ರಾಜಕ್ ಒಟ್ಟು 337 ಅಂಕ ಗಳಿಸಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ. ಇದು ಪ್ರಸಕ್ತ ಏಷ್ಯಾಡ್‌ನಲ್ಲಿ ಭಾರತಕ್ಕೆ 40ನೇ ಪದಕವಾಗಿದೆ. ಈ ಬಾರಿ ಭಾರತದ ಶೂಟರ್‌ಗಳು ಚಿನ್ನ ಮತ್ತು ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತದ ಪದಕಗಳನ್ನು ಹೆಚ್ಚಿಸುತ್ತಿದ್ದಾರೆ. ವಾಸ್ತವವಾಗಿ ಮಹಿಳೆಯರ 50 ಮೀಟರ್ ಟ್ರ‍್ಯಾಪ್‌ನಲ್ಲೂ ಭಾರತಕ್ಕೆ ಚಿನ್ನದ ನಿರೀಕ್ಷೆ ಇತ್ತು. ಆದರೆ ಕೊನೆಯಲ್ಲಿ ಚೀನಾದ ಶೂಟರ್‌ಗಳನ್ನು ಸೋಲಿಸಲು ಭಾರತದ ಈ ವನಿತಾ ಪಡೆಗೆ ಸಾಧ್ಯವಾಗಲಿಲ್ಲ. ಅಂತಿಮವಾಗಿ ಚೀನಾ 356 ಅಂಕ ಗಳಿಸುವ ಮೂಲಕ ವಿಶ್ವ ದಾಖಲೆ ಮುರಿದು ಚಿನ್ನ ಗೆದ್ದುಕೊಂಡರೆ, ಕಜಕಿಸ್ತಾನ 335 ಅಂಕ ಗಳಿಸುವ ಮೂಲಕ ಕಂಚು ಪಡೆಯಿತು.