ಕಾರ್ಕಳ: ನಂದಿನಿ ಪಶು ಆಹಾರದ ಉತ್ಪಾದನಾ ವೆಚ್ಚದಲ್ಲಿ ಹೆಚ್ಚಳ ಮತ್ತು ವ್ಯವಹಾರದಲ್ಲಿ ಆಗುತ್ತಿರುವ ನಷ್ಟವನ್ನು ಪರಿಗಣಿಸಿ ಕೆಎಂಎಫ್ ಅಕ್ಟೋಬರ್ 1ರಿಂದ ಪಶು ಆಹಾರಕ್ಕೆ ಪ್ರತಿ ಟನ್ ಗೆ ರೂ.1000 ದರ ಏರಿಕೆ ಮಾಡಿದೆ. ಆದರೆ ಹೈನುಗಾರಿಕೆಯಲ್ಲಿ ತೊಡಗಿರುವ ರೈತಾಪಿ ವರ್ಗ ದಿನೇ ದಿನೇ ಏರುತ್ತಿರುವ ಹಾಲಿನ ಉತ್ಪಾದನಾ ವೆಚ್ಚದಿಂದ ಹೈನುಗಾರಿಕೆಯಲ್ಲಿ ನಷ್ಟ ಉಂಟಾಗಿ ಹಲವಾರು ಮಂದಿ ಹೈನುಗಾರಿಕೆಯಿಂದ ವಿಮುಖರಾಗುತ್ತಿದ್ದಾರೆ. ರಾಜ್ಯದ ಹೆಚ್ಚಿನ ಒಕ್ಕೂಟಗಳಲ್ಲಿ ದೈನಂದಿನ ಹಾಲು ಸಂಗ್ರಹಣೆಯಲ್ಲಿ ಗಣನೀಯ ಪ್ರಮಾಣದ ಇಳಿಕೆ ಕಂಡುಬರುತ್ತಿದ್ದು ,ಒಕ್ಕೂಟಗಳು ಕೂಡ ನಷ್ಟದ ಹಾದಿಯನ್ನು ಹಿಡಿಯುತ್ತಿವೆ. ಹಾಲಿನ ಮಾರಾಟದರ ಹೆಚ್ಚಿಸಲು ಕೆಎಂಎಫ್ ರಾಜ್ಯ ಸರಕಾರದ ಅನುಮತಿಗೆ ಕಾಯಬೇಕು, ಪಶು ಆಹಾರದ ದರ ಏರಿಸುವಾಗ ಸರಕಾರದ ಅನುಮತಿ ಬೇಕಿರುವುದಿಲ್ಲ. ಆದರೆ ಈ ರೀತಿ ಬೆಲೆ ಏರಿಕೆಯ ಪರಿಣಾಮ ಮಾತ್ರ ನೇರವಾಗಿ ಹೈನುಗಾರರ ಮೇಲಾಗುತ್ತಿದೆ.
ಕಳೆದ ವರ್ಷವಿಡೀ ಕಾಡಿದ ಚರ್ಮ ಗಂಟು ರೋಗ ,ಮೇವಿನ ಕೊರತೆ, ಏರುತ್ತಿರುವ ಹಾಲಿನ ಉತ್ಪಾದನಾ ವೆಚ್ಚವನ್ನು ಪರಿಗಣಿಸಿ ನಂದಿನಿ ಪಶು ಆಹಾರಕ್ಕೆ ಪ್ರತಿ ಕೆಜಿಗೆ ಕನಿಷ್ಠ 5 ರೂ. ಸಬ್ಸಿಡಿ ನೀಡುವುದರ ಮೂಲಕ ಕೆಎಂಎಫ್ ಮತ್ತು ರಾಜ್ಯ ಸರಕಾರ ರೈತರಿಗೆ ಪ್ರೋತ್ಸಾಹ ನೀಡಬೇಕೆಂದು ಸಹಕಾರ ಭಾರತಿ ಹಾಲು ಪ್ರಕೋಷ್ಟದ ರಾಜ್ಯಸಂಚಾಲಕರು ಹಾಗೂ ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕರಾದ ಸಾಣೂರು ನರಸಿಂಹ ಕಾಮತ್ ರವರು ಕೆಎಂಎಫ್ ಮತ್ತು ರಾಜ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.