ಶಿವಮೊಗ್ಗ: ಶಿವಮೊಗ್ಗದ ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದ್ದು, ಬಳಿಕ ಅದು ವಿಕೋಪಕ್ಕೆ ತಿರುಗಿತ್ತು. ಈ ವೇಳೆ ಪೊಲೀಸ್‌ಗೆ ಅವಾಜ್ ಹಾಕಿದ್ದ ವ್ಯಕ್ತಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಸಂದರ್ಭದಲ್ಲಿ ಬಂಧಿತ ವ್ಯಕ್ತಿ ಸಲೀಂ, ಒಂದು ನಾವು ಸಾಯಬೇಕು, ಇಲ್ಲದಿದ್ದರೆ ಅವರು ಸಾಯಬೇಕು. ನಾವು ಸಾಬ್ರು ಹೇಗೆ ಎಂದು ಗೊತ್ತಲ್ಲ ಎಂದು ಪೊಲೀಸ್ ಇನ್ಸ್ಪೆಕ್ಟರ್ ಹರೀಶ್ ಪಟೇಲ್‌ಗೆ ಅವಾಜ್ ಹಾಕಿದ್ದ. ಇದೀಗ ಸಲೀಂನನ್ನು ಪೊಲೀಸರು ಹುಡುಕಿ ಬಂಧಿಸಿದ್ದಾರೆ.
ಈದ್-ಮಿಲಾದ್‌ಹಬ್ಬದಲ್ಲಿ ಆದ ಗಲಾಟೆಯ ಕುರಿತು ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಊಹಾಪೋಹಗಳು ಹಬ್ಬುತ್ತಿವೆ. ಬೇರೆ ಬೇರೆ ರಾಜ್ಯದ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಈ ರೀತಿ ಊಹಾಪೋಹಗಳನ್ನ ಹರಿಬಿಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ ಎಚ್ಚರಿಸಿದ್ದಾರೆ.
ಮೆರವಣಿಗೆ ವೇಳೆ ಎರಡು ಓಮಿನಿ ವಾಹನಗಳಲ್ಲಿ ಆಗಮಿಸಿದ ವಿಚಾರವಾಗಿ ಎರಡೂ ಓಮಿನಿಗಳಲ್ಲಿ ಬಂದವರನ್ನೂ ಸಹ ನಾವು ತನಿಖೆ ಮಾಡಿದ್ದೇವೆ. ಆ ವಾಹನದಲ್ಲಿ ಎರಡೂ ಸಮುದಾಯದ ಜನರು ಬಂದಿದ್ದಾರೆ. ಈ ಬಗ್ಗೆ ನಾವು ಕೂಲಂಕಶವಾಗಿ ತನಿಖೆ ಮಾಡುತ್ತೇವೆ. ಈಗಾಗಲೇ ಸ್ಥಳೀಯ ಪೊಲೀಸರ ವಿಚಾರಣೆಯಿಂದ ಓಮಿನಿ ಕುರಿತು ಸ್ಪಷ್ಟನೆ ಸಿಕ್ಕಿದೆ. ಜೊತೆಗೆ ಬಂಧನ ಮಾಡಿರುವ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.