ಕಾರ್ಕಳ: ಜಿಲ್ಲಾ ರಕ್ತನಿಧಿ ಕೇಂದ್ರ ಉಡುಪಿ, ನಿಟ್ಟೆ ಗಾಜ್ರಿಯಾ ಆಸ್ಪತ್ರೆ, ರೊಟರಿ ಕ್ಲಬ್ ನಿಟ್ಟೆ ಮತ್ತು ಲಯನ್ಸ್ ಕ್ಲಬ್ ಹಿರಿಯಡ್ಕ, ನಿಟ್ಟೆಯ ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕ, ರೆಡ್ ರಿಬನ್ ಕ್ಲಬ್ ಹಾಗೂ ಯೂತ್ ರೆಡ್ ಕ್ರಾಸ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ನಿಟ್ಟೆ ಡಾ.ಎನ್.ಎಸ್.ಎ.ಎಮ್. ಪ್ರಥಮದರ್ಜೆ ಕಾಲೇಜಿನಲ್ಲಿ ಬೃಹತ್ ರಕ್ತದಾನ ಶಿಬಿರ ಜರುಗಿತು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಉಡುಪಿ ರಕ್ತನಿಧಿ ಕೇಂದ್ರದ ಅಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ವೀಣಾ ಮಾತನಾಡಿ, ಒಂದು ಯುನಿಟ್ ರಕ್ತದಿಂದ ನಾಲ್ಕು ಜೀವಗಳನ್ನು ಉಳಿಸಬಹುದು. ಆರೋಗ್ಯವಂತ ವ್ಯಕ್ತಿಗಳು ಯಾವುದೇ ಹಿಂಜರಿಕೆ ಇಲ್ಲದೆ ರಕ್ತದಾನ ಮಾಡಬೇಕು ಹಾಗೂ ವಿದ್ಯಾರ್ಥಿಗಳು ರಕ್ತದಾನದ ಮೂಲಕ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ.ವೀಣಾ ಕುಮಾರಿ ಮಾತನಾಡಿ, ಅರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ವಿದ್ಯಾರ್ಥಿಗಳು ಭಾಗವಹಿಸಬೇಕು, ಈ ಮೂಲಕ ಸ್ವಸ್ಥ ಸಮಾಜದ ಪಾಲುದಾರರಾಗಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ನಿಟ್ಟೆ ಗಾಜ್ರಿಯಾ ಅಸ್ಪತ್ರೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಶುಭಕರ್ ಅಂಚನ್, ನಿಟ್ಟೆ ರೋಟರಿ ಕ್ಲಬ್ ಅಧ್ಯಕ್ಷರಾದ ಡಾ.ಕೃಷ್ಣಪ್ರಸಾದ್, ಲಯನ್ಸ್ ಕ್ಲಬ್ ಹಿರಿಯಡ್ಕ ಅಧ್ಯಕ್ಷರಾದ ಮೋಹನ್‌ದಾಸ್ ಅಚಾರ್ಯ, ಯೂತ್ ರೆಡ್‌ಕ್ರಾಸ್ ಸಂಯೋಜಕಿ ಶ್ರೀಮತಿ ರಶ್ಮಿ ಹಾಗೂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನ ಘಟಕಾಧಿಕಾರಿಗಳು ಉಪಸ್ಥಿತರಿದ್ದರು.
ಕುಮಾರಿ ಶರಣ್ಯ ಪುತ್ರಾಯ ಸ್ವಾಗತಿಸಿ, ಕುಮಾರಿ ಸೋನಲ್ ಪ್ರೀತಿ ವಂದಿಸಿದರು. ಕುಮಾರಿ ಸ್ಮೃತಿ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ ವಿದ್ಯಾರ್ಥಿಗಳು, ಅಧ್ಯಾಪಕ ಮತ್ತು ಅಧ್ಯಾಪಕೇತರ ವರ್ಗದವರಿಂದ ಒಟ್ಟು 165 ಯುನಿಟ್ ರಕ್ತವನ್ನು ಸಂಗ್ರಹಿಸಲಾಯಿತು.