Share this news

ಉಡುಪಿ:ಆರೋಗ್ಯ ಇಲಾಖೆಯ ‘108 ಆರೋಗ್ಯ ಕವಚ’ ತುರ್ತು ಚಿಕಿತ್ಸಾ ವಾಹನಗಳಲ್ಲಿ ಸೇವೆಸಲ್ಲಿಸುತ್ತಿರುವ ರಾಜ್ಯದ ಒಟ್ಟಾರೆ 3,500 ಸಿಬ್ಬಂದಿಗಳು ಕಳೆದ 4 ತಿಂಗಳಿನಿಂದ ವೇತನವಿಲ್ಲದೇ ಪರದಾಟ ನಡೆಸುವಂತಾಗಿದೆ.

108 ತುರ್ತು ಚಿಕಿತ್ಸಾ ವಾಹನಗಳ ಚಾಲಕರು ಹಾಗೂ ನರ್ಸ್‌ಗಳಿಗೆ ಕಳೆದ ಜೂನ್ ತಿಂಗಳಿನಿಂದ ವೇತನ ಪಾವತಿಯಾಗಿಲ್ಲ. ಇತ್ತ ಸಿಬ್ಬಂದಿಗಳು ಸಂಬಳವಿಲ್ಲದೇ ಜೀವನ ನಡೆಸಲು ಹೆಣಗಾಟ ನಡೆಸುವ ಕುರಿತಾಗಿ ಯೋಜನೆಯನ್ನು ನಿರ್ವಹಿಸುತ್ತಿರುವ ಜಿವಿಕೆ- ಇಎಂಆರ್‌ಐ ಸಂಸ್ಥೆಯನ್ನು ಪ್ರಶ್ನಿಸಿದರೆ,ಸರಕಾರದಿಂದ ಹಣ ಬಿಡುಗಡೆಯಾಗಿಲ್ಲ ಹಾಗಾಗಿ ವೇತನ ಪಾವತಿ ವಿಳಂಬವಾಗಿದೆ ಎಂದು ಹೇಳಿಕೆ ನೀಡಿದ್ದಾರೆ, ಆದರೆ ಸರ್ಕಾರದಿಂದ ಪಾವತಿಯಾಗಬೇಕಿರುಚ ಹಣವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಎಂದು ಸರಕಾರ ಹೇಳಿದೆ.ಆದರೆ ಸರ್ಕಾರ ಹಾಗೂ ಸಂಸ್ಥೆಯ ನಡುವಿನ ತಿಕ್ಕಾಟದಿಂದ ಸಿಬ್ಬಂದಿಗಳು ಮಾತ್ರ ಜೀವನ ನಿರ್ವಹಣೆಗೆ ಪರದಾಡುವಂತಾಗಿದೆ.

ಸರಕಾರ ಪ್ರತೀ 3 ತಿಂಗಳಿಗೊಮ್ಮೆ 40.60 ಕೋ.ರೂ. ಗಳನ್ನು ಈ ಸಂಸ್ಥೆಗೆ ನೀಡುತ್ತಿದೆ,ಆದರೆ ಈ ಮೊತ್ತದದ ಬದಲಿಗೆ ಸರ್ಕಾರ 58 ಕೋ.ರೂ. ಪಾವತಿಸಬೇಕೆಂದು ಜಿವಿಕೆ- ಇಎಂಆರ್‌ಐ ಸಂಸ್ಥೆ ಹೇಳುತ್ತಿದೆ. ಇದೇ ವಿಚಾರದಲ್ಲಿ ಸಿಬ್ಬಂದಿಗಳಿಗೆ ವೇತನ ವಿಳಂಬವಾಗುತ್ತಿದೆ ಎನ್ನಲಾಗಿದೆ.
ಕಳೆದ 2022ರ ಆಗಸ್ಟ್‌ ವರೆಗೆ 108 ಆಯಂಬುಲೆನ್ಸ್‌ ನೌಕರರಿಗೆ 12 ಸಾವಿರ ರೂ.ನಿಂದ ಆರಂಭಗೊಂಡು ಜ್ಯೇಷ್ಠತೆ ಆಧಾರದಲ್ಲಿ ಗರಿಷ್ಠ 17 ಸಾವಿರ ರೂ. ವೇತನ ನೀಡಲಾಗುತ್ತಿತ್ತು. ಆದರೆ ನೌಕರರ ಹೋರಾಟದ ಬಳಿಕ ವೇತನವನ್ನು ಆಗಸ್ಟ್‌ನಿಂದ ಏರಿಸಲಾಗಿದೆ. ಇದು 3 ವರ್ಷಗಳ ಹಿಂದಿನಿಂದಲೇ ಅನ್ವಯ ಎಂದು ನಿರ್ಧರಿಸಿದ್ದರೂ ಆ ಹಿಂಬಾಕಿ ಹಣ ಇನ್ನೂ ಪಾವತಿಯಾಗಿಲ್ಲ.ಇದಕ್ಕಾಗಿ ಸುಮಾರು 40 ಕೋ.ರೂ. ಅಗತ್ಯವಿದ್ದು, ಸರಕಾರದಿಂದ ಬಿಡುಗಡೆಯಾಗಬೇಕಿದೆ ಎಂದು ಜಿವಿಕೆ ಹೇಳಿದೆ.

ಉಡುಪಿ ಹಾಗೂ ದ.ಕ ಜಿಲ್ಲೆಗಳಲ್ಲಿ ಒಟ್ಟು 49 ತುರ್ತು ಚಿಕಿತ್ಸಾ ವಾಹನಗಳಿದ್ದು 160 ಸಿಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ‌. ಉಡುಪಿ ಜಿಲ್ಲೆಯಲ್ಲಿ ಕುಂದಾಪುರ ಬ್ರಹ್ಮಾವರ ತಲಾ 4, ಬೈಂದೂರು, ಕಾರ್ಕಳದ ತಲಾ 3, ಉಡುಪಿ, ಕಾಪುವಿನ ತಲಾ 2 ಹಾಗೂ ಹೆಬ್ರಿ ತಾಲೂಕಿನಲ್ಲಿ 1 ಸೇರಿದಂತೆ ಒಟ್ಟು 19 ವಾಹನಗಳಿವೆ. 45 ಚಾಲಕರು ಹಾಗೂ 18 ನರ್ಸ್‌ಗಳಿದ್ದಾರೆ. ದ.ಕ. ಜಿಲ್ಲೆಯ ಮಂಗಳೂರಿನಲ್ಲಿ 9, ಬಂಟ್ವಾಳದಲ್ಲಿ 6, ಬೆಳ್ತಂಗಡಿ, ಸುಳ್ಯದಲ್ಲಿ ತಲಾ 4, ಪುತ್ತೂರಿನಲ್ಲಿ 3, ಕಡಬ, ಮೂಡುಬಿದಿರೆಯಲ್ಲಿ ತಲಾ 2 ಆಂಬುಲೆನ್ಸ್‌ ಗಳಿವೆ. ಇದರಲ್ಲಿ 58 ಚಾಲಕರು ಹಾಗೂ 39 ನರ್ಸ್‌ಗಳಿದ್ದಾರೆ.

ಬಡರೋಗಿಗಳ ಜೀವ ರಕ್ಷಕರಾಗಿರುವ ದಿನದ 24 ಗಂಟೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ ಸರಿಯಾದ ಸಮಯಕ್ಕೆ ವೇತನ ಪಾವತಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.

 

 

 

 

 

 

 

 

 

Leave a Reply

Your email address will not be published. Required fields are marked *