ನವದೆಹಲಿ:ಉತ್ತರ ಭಾರತದ ಐದು ಪ್ರಮುಖ ರಾಜ್ಯಗಳಾದ ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್ಗಢ, ತೆಲಂಗಾಣ ಹಾಗೂ ಮಿಜೋರಾಂ ರಾಜ್ಯಗಳಿಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದೆ.
ಈ ಕುರಿತು ಕೇಂದ್ರ ಚುನಾವಣಾ ಆಯೋಗದ ಆಯುಕ್ತರಾದ ರಾಜೀವ್ ಕುಮಾರ್, ಸುದ್ದಿಗೋಷ್ಟಿ ನಡೆಸಿ ಮಾತನಾಡಿ,
ಮಿಜೋರಾಂ ನಲ್ಲಿ ನವೆಂಬರ್ 7 ರಂದು ಚುನಾವಣೆ ನಡೆಯಲಿದೆ, ಛತ್ತೀಸ್ಗಢದಲ್ಲಿ ನವೆಂಬರ್ 7 ಹಾಗೂ 17ರಂದು ಒಟ್ಟು 2 ಹಂತದಲ್ಲಿ ಮತದಾನ ನಡೆಯಲಿದೆ, ಮಧ್ಯಪ್ರದೇಶದಲ್ಲಿ ನವೆಂಬರ್ 17ರಂದು ಹಾಗೂ ರಾಜಸ್ಥಾನದಲ್ಲಿ ನವೆಂಬರ್ 23 ರಂದು ಮತದಾನ ನಡೆಯಲಿದೆ. ತೆಲಂಗಾಣದಲ್ಲಿ ನವೆಂಬರ್ 30 ರಂದು ಚುನಾವಣೆ ನಡೆಯಲಿದೆ. ಈ ಐದು ರಾಜ್ಯಗಳ ಚುನಾವಣಾ ಫಲಿತಾಂಶವನ್ನು ಡಿಸೆಂಬರ್ 3 ರಂದು ಪ್ರಕಟವಾಗಲಿದೆ ಎಂದರು
ಒಟ್ಟು ಐದು ರಾಜ್ಯಗಳಲ್ಲಿ 679 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದ್ದು, ಈ ಐದೂ ರಾಜ್ಯಗಳಲ್ಲಿ 16.14 ಕೋಟಿ ಮತದಾರರಿದ್ದಾರೆ ಎಂದು ರಾಜೀವ್ ಕುಮಾರ್ ವಿವರ ನೀಡಿದರು. ಮಿಜೋರಾಂನಲ್ಲಿ 8.52 ಲಕ್ಷ, ಛತ್ತೀಸ್ಗಢದಲ್ಲಿ 2.03 ಕೋಟಿ, ಮಧ್ಯಪ್ರದೇಶದಲ್ಲಿ 5.6 ಕೋಟಿ, ರಾಜಸ್ಥಾನದಲ್ಲಿ 5.25 ಕೋಟಿ ಹಾಗೂ ತೆಲಂಗಾಣದಲ್ಲಿ 3.17 ಕೋಟಿ ಮತದಾರರು ಇದ್ದಾರೆ ಹಾಗೂ ಈ 5 ರಾಜ್ಯಗಳಲ್ಲಿ 60.20 ಲಕ್ಷ ಹೊಸ ಮತದಾರರಿದ್ದಾರೆ, ಮುಂಬರುವ 5 ರಾಜ್ಯಗಳಲ್ಲಿ 7.8 ಕೋಟಿ ಮಹಿಳೆಯರು ಮತ ಚಲಾವಣೆ ಮಾಡಲಿದ್ದಾರೆ.
ಮತದಾರರ ಅನುಭವವನ್ನು ಹೆಚ್ಚಿಸಲು 17,734 ಮಾದರಿ ಮತಗಟ್ಟೆಗಳು, 621 ಮತಗಟ್ಟೆಗಳನ್ನು ವಿಶೇಷ ಚೇತನ ಸಿಬ್ಬಂದಿ ನಿರ್ವಹಿಸುತ್ತಾರೆ ಮತ್ತು 8,192 ಪೋಲಿಂಗ್ ಸ್ಟೇಷನ್ಗಳಲ್ಲಿ ಮಹಿಳೆಯರು ಕರ್ತವ್ಯ ನಿರ್ವಹಿಸಲಿದ್ದಾರೆ ಎಂದು ರಾಜೀವ್ ಕುಮಾರ್ ಮಾಹಿತಿ ನೀಡಿದರು.
ತೆಲಂಗಾಣ, ರಾಜಸ್ಥಾನ,ಛತ್ತೀಸ್ಗಢ ಮತ್ತು ಮಧ್ಯಪ್ರದೇಶದ ವಿಧಾನಸಭೆಗಳ ಅವಧಿಯು ಜನವರಿ 2024 ರಲ್ಲಿ ವಿವಿಧ ದಿನಾಂಕಗಳಲ್ಲಿ ಮುಕ್ತಾಯಗೊಳ್ಳಲಿದೆ, ಆದರೆ ಮಿಜೋರಾಂ ವಿಧಾನಸಭೆಯ ಅವಧಿಯು ಈ ವರ್ಷ ಡಿಸೆಂಬರ್ 17 ರಂದು ಕೊನೆಗೊಳ್ಳಲಿದೆ. ತೆಲಂಗಾಣದಲ್ಲಿ ಭಾರತ್ ರಾಷ್ಟ್ರ ಸಮಿತಿ (ಬಿಆರ್ಎಸ್) ಆಡಳಿತ ನಡೆಸುತ್ತಿದ್ದರೆ, ಮಧ್ಯಪ್ರದೇಶದಲ್ಲಿ ಬಿಜೆಪಿ ಆಡಳಿತದಲ್ಲಿದೆ. ಛತ್ತೀಸ್ಗಢ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ ಮತ್ತು ಈಶಾನ್ಯ ರಾಜ್ಯದಲ್ಲಿ ಮಿಜೋ ನ್ಯಾಷನಲ್ ಫ್ರಂಟ್ ಅಧಿಕಾರದಲ್ಲಿದೆ.
ವಿವಿಧ ರಾಜ್ಯಗಳ ಚುನಾವಣಾ ಪ್ರಕ್ರಿಯೆಯ ವಿವರಗಳು
ಮಿಜೋರಾಂ ವಿಧಾನಸಭೆ ಚುನಾವಣೆ ಅಧಿಸೂಚನೆ ಪ್ರಕಟ: ಅಕ್ಟೋಬರ್ 13
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ಅಕ್ಟೋಬರ್ 20
ನಾಮಪತ್ರ ಪರಿಶೀಲನೆ: ಅಕ್ಟೋಬರ್ 21
ನಾಮಪತ್ರ ಹಿಂಪಡೆಯಲು ಕೊನೇ ದಿನ: ಅಕ್ಟೋಬರ್ 23
ಮತದಾನದ ದಿನಾಂಕ: ನವೆಂಬರ್ 7
ಛತ್ತೀಸ್ ಗಢ ವಿಧಾನಸಭೆ ಚುನಾವಣೆ
ಅಧಿಸೂಚನೆ ಪ್ರಕಟ: ಅಕ್ಟೋಬರ್ 13 (ಮೊದಲ ಹಂತ), ಅಕ್ಟೋಬರ್ 21 (2ನೇ ಹಂತ)
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ಅಕ್ಟೋಬರ್ 20 (ಮೊದಲ ಹಂತ), ಅಕ್ಟೋಬರ್ 30 (2ನೆ ಹಂತ)
ನಾಮಪತ್ರ ಪರಿಶೀಲನೆ: ಅಕ್ಟೋಬರ್ 21 (ಮೊದಲ ಹಂತ), ಅಕ್ಟೋಬರ್ 31 (2ನೇ ಹಂತ)
ನಾಮಪತ್ರ ಹಿಂಪಡೆಯಲು ಕೊನೇ ದಿನ: ಅಕ್ಟೋಬರ್ 23 (ಮೊದಲ ಹಂತ), ನವೆಂಬರ್ 2 (2ನೇ ಹಂತ)
ಮತದಾನದ ದಿನಾಂಕ: ನವೆಂಬರ್ 7 (ಮೊದಲ ಹಂತ), ನವೆಂಬರ್ 17 (2ನೇ ಹಂತ)
ಮಧ್ಯಪ್ರದೇಶ ವಿಧಾನಸಭೆ ಚುನಾವಣೆ
ಅಧಿಸೂಚನೆ ಪ್ರಕಟ: ಅಕ್ಟೋಬರ್ 21
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ಅಕ್ಟೋಬರ್ 30
ನಾಮಪತ್ರ ಪರಿಶೀಲನೆ: ಅಕ್ಟೋಬರ್ 31
ನಾಮಪತ್ರ ಹಿಂಪಡೆಯಲು ಕೊನೇ ದಿನ: ನವೆಂಬರ್ 2
ಮತದಾನದ ದಿನಾಂಕ: ನವೆಂಬರ್ 17
ರಾಜಸ್ಥಾನ ವಿಧಾನಸಭೆ ಚುನಾವಣೆ
ಅಧಿಸೂಚನೆ ಪ್ರಕಟ: ಅಕ್ಟೋಬರ್ 30
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ನವೆಂಬರ್ 6
ನಾಮಪತ್ರ ಪರಿಶೀಲನೆ: ನವೆಂಬರ್ 7
ನಾಮಪತ್ರ ಹಿಂಪಡೆಯಲು ಕೊನೇ ದಿನ: ನವೆಂಬರ್ 9
ಮತದಾನದ ದಿನಾಂಕ: ನವೆಂಬರ್ 23
ತೆಲಂಗಾಣ ವಿಧಾನಸಭೆ ಚುನಾವಣೆ
ಅಧಿಸೂಚನೆ ಪ್ರಕಟ: ನವೆಂಬರ್ 3
ನಾಮಪತ್ರ ಸಲ್ಲಿಕೆಗೆ ಕೊನೇ ದಿನ: ನವೆಂಬರ್ 10
ನಾಮಪತ್ರ ಪರಿಶೀಲನೆ: ನವೆಂಬರ್ 13
ನಾಮಪತ್ರ ಹಿಂಪಡೆಯಲು ಕೊನೇ ದಿನ: ನವೆಂಬರ್ 15
ಮತದಾನದ ದಿನಾಂಕ: ನವೆಂಬರ್ 30
ಪಂಚ ರಾಜ್ಯಗಳ ಚುನಾವಣೆಯ ಫಲಿತಾಂಶ: ಡಿಸೆಂಬರ್ 3ರಂದು ಭಾನುವಾರ ನಡೆಯಲಿದೆ.