ನವದೆಹಲಿ : ಮುಂದಿನ ತಿಂಗಳು ನಡೆಯಲಿರುವ ಮಧ್ಯಪ್ರದೇಶ, ಛತ್ತೀಸ್ಗಢ ಹಾಗೂ ತೆಲಂಗಾಣ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಮಧ್ಯಪ್ರದೇಶಕ್ಕೆ 144, ಛತ್ತೀಸ್ಗಢಕ್ಕೆ 30 ಹಾಗೂ ತೆಲಂಗಾಣಕ್ಕೆ 55 ಅಭ್ಯರ್ಥಿಗಳನ್ನು ಪ್ರಕಟಿಸಿದೆ.
ಮಧ್ಯಪ್ರದೇಶದಲ್ಲಿ ಪಕ್ಷದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕಮಲನಾಥ್ ಅವರಿಗೆ ಅವರ ಕ್ಷೇತ್ರವಾದ ಚಿಂದ್ವಾರಾ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಪುತ್ರ ಜೈವರ್ಧನ್ ಸಿಂಗ್ ಅವರಿಗೆ ರಾಘೋಘಡದ ಟಿಕೆಟ್ ನೀಡಿದೆ. ಒಟ್ಟು 69 ಹಾಲಿ ಶಾಸಕರಿಗೆ ಟಿಕೆಟ್ ನೀಡಲಾಗಿದೆ.
ಕಾಂಗ್ರೆಸ್ 2018ರಲ್ಲಿ ಕಿರುತೆರೆಯಲ್ಲಿ ಪ್ರಸಾರವಾದ ರಾಮಾಯಣದ ಹನುಮನ ಪಾತ್ರದಾರಿ ವಿಕ್ರಮ್ ಮಸ್ತಾಲ್ ಅವರನ್ನು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ವಿರುದ್ಧ ಕಣಕ್ಕಿಳಿಸಿದೆ.
ಛತ್ತೀಸ್ಗಢದಲ್ಲಿ ಹಾಲಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ಗೆ ಅವರ ಪಾಟನ್ ಕ್ಷೇತ್ರ ಹಾಗೂ ಉಪ ಮುಖ್ಯಮಂತ್ರಿ ಟಿ.ಎಸ್.ಸಿಂಗ್ ದೇವ್ ಅವರಿಗೆ ಅಂಬಿಕಾಪುರ ಕ್ಷೇತ್ರ, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಾಲಿ ಸಂಸದ ದೀಪಕ್ ಬೈಜ್ ಅವರಿಗೆ ಚಿತ್ರಕೂಟದ ಟಿಕೆಟ್ ನೀಡಲಾಗಿದೆ. ತೆಲಂಗಾಣದಲ್ಲಿ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಹಾಗೂ ಹಾಲಿ ಸಂಸದ ಅನುಮಾಲ ರೇವಂತ್ ರೆಡ್ಡಿ ಅವರಿಗೆ ಕೋಡಂಗಲ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಭಟ್ಟಿ ವಿಕ್ರಮಾರ್ಕ ಮಲ್ಲು ಅವರಿಗೆ ಮಧಿರಾ ಕ್ಷೇತ್ರದ ಟಿಕೆಟ್ ನೀಡಿದೆ. ಹಾಲಿ ಸಂಸದ ಉತ್ತಮ ಕುಮಾರ್ ರೆಡ್ಡಿಗೆ ಹುಜೂರ್ನಗರ ಕ್ಷೇತ್ರದ ಟಿಕೆಟ್, ಪಕ್ಷದ ರಾಷ್ಟ್ರೀಯ ವಕ್ತಾರ ಪವನ್ ಖೇರಾ ಅವರ ಪತ್ನಿ ಕೋಟ ನೀಲಿಮಾ ಅವರಿಗೆ ಸನತ್ನಗರ ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ಛತ್ತೀಸ್ಗಢದಲ್ಲಿ ನ.7 ಹಾಗೂ 17ರಂದು, ಮಧ್ಯಪ್ರದೇಶದಲ್ಲಿ ನ.17ರಂದು ಹಾಗೂ ತೆಲಂಗಾಣದಲ್ಲಿ ನ.30ರಂದು ಮತದಾನ ನಡೆಯಲಿದೆ. ಡಿ.3ರಂದು ಫಲಿತಾಂಶ ಪ್ರಕಟವಾಗಲಿದೆ.