ಕಾರ್ಕಳ: ಪರಶುರಾಮನ ಮೂರ್ತಿಯ ನೈಜತೆ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿ ಆರೋಪ ಪ್ರತ್ಯಾರೋಪ ತಾರಕಕ್ಕೇರಿದ್ದು, ಕಾಂಗ್ರೆಸ್ ಪಕ್ಷದ ಮುಖಂಡರು ಸಾಲುಸಾಲಾಗಿ ಪರಶುರಾಮ ಪ್ರತಿಮೆಯ ಅಸಲಿಯತ್ತು ವಿಚಾರದಲ್ಲಿ ನಿರಂತರ ಹೋರಾಟ ನಡೆಸುತ್ತಿದ್ದು, ಗುರುವಾರ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿಯವರು ಕಾಂಗ್ರೆಸ್ ಕಾರ್ಯಕರ್ತರ ಜತೆಗೆ ಥೀಮ್ ಪಾರ್ಕಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇವೇಳೆ ಕಾಂಗ್ರೆಸ್ ಕಾರ್ಯಕರ್ತರು ಪರಶುರಾಮ ಪ್ರತಿಮೆ ಗ್ಲಾಸ್ ಫೈಬರ್ ನಿಂದಲೇ ನಿರ್ಮಿಸಲಾಗಿದೆ ಎಂದು ಆರೋಪಿಸಿ ಮೂರ್ತಿಗೆ ಬಳಸಿದ್ದಾರೆ ಎನ್ನಲಾದ ಕೆಲವು ತುಣುಕುಗಳನ್ನು ಪ್ರದರ್ಶಿಸಿ ಆಕ್ರೋಶ ಹೊರಹಾಕಿದ್ದಾರೆ.
ಇತ್ತ ಕಾಂಗ್ರೆಸ್ ಕಾರ್ಯಕರ್ತರ ಆರೋಪಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತರು ಪರಶುರಾಮ ಥೀಮ್ ಪಾರ್ಕಿಗೆ ದೌಡಾಯಿಸಿ ಪರಶುರಾಮನ ಮೂರ್ತಿಯ ಅಸಲಿಯತ್ತು ಪರೀಕ್ಷಿಸಲು ಮುಂದಾದರು. ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಸುತ್ತಿಗೆ ಹಾಗೂ ಕಬ್ಬಿಣದ ಸಲಾಕೆಯಿಂದ ಮೂರ್ತಿಯ ಭಾಗಗಳಿಗೆ ಬಡಿದು ಇದು ನೈಜ ಕಂಚಿನ ಪ್ರತಿಮೆಯಾಗಿದೆ, ಪ್ರತಿಮೆಯ ವಿವಿಧ ಭಾಗಗಳ ಜೋಡಣೆಯ ಸಂದರ್ಭದಲ್ಲಿ ಹಾಕಿರುವ ಬೆಸುಗೆಗಳ ಜಾಗಕ್ಕೆ ಮಾತ್ರ ಗ್ಲಾಸ್ ಫೈಬರ್ ಹೊದಿಕೆ ಮಾಡಲಾಗಿದೆ, ಆದರೆ ಕಾಂಗ್ರೆಸ್ ಮುಖಂಡರು ಇದೇ ವಿಚಾರವನ್ನು ಮುಂದಿಟ್ಟುಕೊAಡು ಪ್ರತಿಮೆಯೇ ನಕಲಿ ಎನ್ನುವ ಮೊಂಡುವಾದ ಮಾಡುವ ಮೂಲಕ ವಿನಾಕಾರಣ ವಿವಾದ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ ಪರಶುರಾಮನ ಮೂರ್ತಿಯ ನೈಜತೆ ವಿಚಾರದಲ್ಲಿ ಯಾರೂ ಬೇಕಾದರೂ ಫ್ಯಾಕ್ಟ್ ಚೆಕ್ ಮೂಲಕ ಪರೀಕ್ಷಿಸಬಹುದು ಎಂದು ಸವಾಲು ಹಾಕಿದ್ದಾರೆ. ಪ್ರತಿಮೆಗೆ ಗ್ಲಾಸ್ ಫೈಬರ್ ಶೀಟ್ ಅಳವಡಿಸಲಾಗಿರುವುದು ಸಾಬೀತಾಗಿದೆ ಪರಶುರಾಮನ ಪ್ರತಿಮೆ ನಕಲಿ ಎಂದು ಬಟಾಬಯಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡಿದರೆ,ಇತ್ತ ಬಿಜೆಪಿಯು ಪರಶುರಾಮನ ಪ್ರತಿಮೆ ಅಸಲಿ ಎನ್ನುವ ವಾದ ಮುಂದಿಟ್ಟಿದೆ.
ಈ ಯೋಜನೆಯ ಕುರಿತಂತೆ ಸರ್ಕಾರ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದು, ಈ ಯೋಜನೆಯಲ್ಲಿ ಯಾವುದೇ ಅವ್ಯವಹಾರವಾಗಿಲ್ಲ ಎಲ್ಲವೂ ಪಾರದರ್ಶಕವಾಗಿಯೇ ನಡೆದಿದೆ, ನಿಮ್ಮದೇ ಸರ್ಕಾರವಿದೆ ಬೇಕಾದರೆ ತನಿಖೆ ಮಾಡಬಹುದು ಎಂದು ಬಿಜೆಪಿ ಹೇಳಿಕೆ ನೀಡಿದೆ.
ಒಟ್ಟಿನಲ್ಲಿ ಪರಶುರಾಮನ ಪ್ರತಿಮೆ ವಿವಾದವು ರಾಜಕೀಯ ವಲಯದಲ್ಲಿ ತೀವೃ ಚರ್ಚೆಗೆ ಗ್ರಾಸವಾಗುತ್ತಿದ್ದು, ಕಾಂಗ್ರೆಸ್ ಬಿಜೆಪಿ ನಡುವೆ ಕೆಸರೆರಚಾಟಕ್ಕೆ ಕಾರಣವಾಗಿದೆ.