ಮುಂಬೈ: ಭಾರತದ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ ಮುಕೇಶ್ ಅಂಬಾನಿ ಅವರಿಗೆ ಅಪರಿಚಿತ ವ್ಯಕ್ತಿ ಜೀವ ಬೆದರಿ ಹಾಕಿ, ಇಮೇಲ್ ಮೂಲಕ 20 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದಾನೆ. ತನ್ನ ಬಳಿ ಅತ್ಯುತ್ತಮ ಶಾರ್ಪ್ ಶೂಟರ್ಗಳಿದ್ದಾರೆ, ಬೇಡಿಕೆಯ ಮೊತ್ತವನ್ನು ಕೊಡದಿದ್ದರೆ ಕೊಲೆ ಮಾಡುವುದಾಗಿ ಬರೆದುಕೊಂಡಿದ್ದಾನೆ.ಈ ಕುರಿತು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಆರಂಭಿಸಿದ್ದಾರೆ.
ಪೊಲೀಸ್ ಮೂಲಗಳ ಪ್ರಕಾರ, ಅಕ್ಟೋಬರ್ 27 ರಂದು ಮುಕೇಶ್ ಅಂಬಾನಿ ಅವರ ಇಮೇಲ್ ಐಡಿಗೆ ಇಮೇಲ್ ಬಂದಿದೆ. ಈ ಇಮೇಲ್ನಲ್ಲಿ ಮುಕೇಶ್ ಹಣಕ್ಕೆ ಬೇಡಿಕೆ ಇಡಲಾಗಿದೆ. ಹಣ ನೀಡದಿದ್ದರೆ ಹತ್ಯೆ ಮಾಡಲಾಗುವುದು ಎಂದು ಇಂಗ್ಲಿಷ್ನಲ್ಲಿ ಬರೆಯಲಾಗಿದೆ. ಈ ಬಗ್ಗೆ ಮುಕೇಶ್ ಅಂಬಾನಿ ಅವರ ಭದ್ರತಾ ಉಸ್ತುವಾರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮುಂಬೈಯ ಗಾಮದೇವಿ ಪೊಲೀಸರು ಅಪರಿಚಿತ ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 387 ಮತ್ತು 506 (2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಸಂಬAಧ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಈ ಹಿಂದೆಯೂ ಮೊದಲು ಮುಕೇಶ್ ಅಂಬಾನಿ ಮತ್ತು ಅವರ ಪತ್ನಿ ನೀತಾ ಅಂಬಾನಿ ಅವರಿಗೆ ಕೊಲೆ ಬೆದರಿಕೆಗಳು ಬಂದಿದ್ದವು. ಇದಕ್ಕೂ ಮೊದಲು, ಅಕ್ಟೋಬರ್ 6, 2022 ರಂದು, ಅವರಿಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಬಿಹಾರದಿಂದ ಬಂಧಿಸಲಾಗಿತ್ತು. ಆರೋಪಿಯನ್ನು 30 ವರ್ಷದ ರಾಕೇಶ್ ಕುಮಾರ್ ಮಿಶ್ರಾ ಎಂದು ಗುರುತಿಸಲಾಗಿತ್ತು.
ಅಕ್ಟೋಬರ್ 5, 2022 ರಂದು, ಆರೋಪಿಯು ರಿಲಯನ್ಸ್ ಫೌಂಡೇಶನ್ನ ಆಸ್ಪತ್ರೆಗೆ ಕರೆ ಮಾಡಿ ಅಂಬಾನಿ ಕುಟುಂಬವನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದ. ಅಷ್ಟೇ ಅಲ್ಲ ಇಡೀ ಆಸ್ಪತ್ರೆಯನ್ನು ಬಾಂಬ್ ಇಟ್ಟು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಈ ವೇಳೆ ಪೊಲೀಸರು ಆರೋಪಿಯನ್ನು ಗುರುತಿಸಿ ಬಂಧಿಸಿದ್ದರು. ಆರೋಪಿ ಯುವಕ ನಿರುದ್ಯೋಗಿ ಎಂದು ಪೊಲೀಸರು ಮಾಹಿತಿ ನೀಡಿದ್ದರು.