ಅಜೆಕಾರು: ಮರ್ಣೆ ಗ್ರಾಮದ ಕಾಡುಹೊಳೆ ಪರಿಸರದಲ್ಲಿ ಭಾನುವಾರ ಮುಂಜಾನೆ ಕಾಡುಕೋಣಗಳ ಹಿಂಡೊAದು ದಾಂಗುಡಿಯಿಟ್ಟಿದ್ದು ಕೃಷಿ ಜಮೀನಿಗೆ ದಾಳಿ ನಡೆಸಿ ಬೆಳಗಳಿಗೆ ಹಾನಿಯಾಗಿದೆ.
ಒಟ್ಟು ಮೂರು ಕಾಡುಕೋಣಗಳು ಏಕಾಏಕಿ ಕಾಡುಹೊಳೆ ಶಾಲೆ ಬಳಿಯ ನಿವಾಸಿ ವಸಂತ ಪೈ ಹಾಗೂ ಶಾಂತ ಹೆಗ್ಡೆಯವರ ಜಮೀನಿಗೆ ನುಗ್ಗಿ ಕೃಷಿಗೆ ಹಾನಿ ಮಾಡಿವೆ. ಈ ಕುರಿತು ಸುದ್ದಿತಿಳಿದ ಸ್ಥಳೀಯರು ಕಾಡುಕೋಣಗಳನ್ನು ಬೆದರಿಸಿ ಓಡಿಸಲು ಯತ್ನಿಸಿದ್ದಾರೆ. ಆದರೆ ಕಾಡುಕೋಣಗಳು ಕಾಡಿನತ್ತ ಮುಖಮಾಡದೇ ಸುತ್ತಮುತ್ತಲಿನಲ್ಲಿ ಪ್ರದೇಶದ ಪೊದೆಯೊಳಗೆ ಅವಿತುಕೊಂಡಿದ್ದು, ಇದರಿಂದ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದೆ. ಒಂದು ಕಾಡುಕೋಣದ ಕಾಲಿಗೆ ಏಟಾಗಿದ್ದು ಓಡಾಡಲಾಗದೇ ಸುತ್ತಮುತ್ತಲಿನ ಪರಿಸರದಲ್ಲಿ ಠಿಕಾಣಿ ಹೂಡಿದೆ.
ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿರುವ ಕಾಡುಕೋಣಗಳು ಅಡಿಕೆ ಹಾಗೂ ಬಾಳೆ ತೋಟಗಳಿಗೆ ದಾಳಿ ಮಾಡುವ ಸಾಧ್ಯತೆಯಿದ್ದು, ಅರಣ್ಯಾಧಿಕಾರಿಗಳು ಈ ಕುರಿತು ಕ್ರಮಕ್ಕೆ ಮುಂದಾಗಬೇಕೆAದು ಸ್ಥಳೀಯರು ಒತ್ತಾಯಿಸಿದ್ದಾರೆ