ಬೆಂಗಳೂರು: ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ಪ್ರತಿಮಾ ಕೊಲೆ ಪ್ರಕರಣದಲ್ಲಿ ಮಹತ್ವದ ತಿರುವು ಸಿಕ್ಕಿದೆ. ಕೊಲೆ ಮಾಡಿದ್ದ ಪ್ರಮುಖ ಆರೋಪಿ ಅಧಿಕಾರಿಯ ಮಾಜಿ ಕಾರು ಚಾಲಕ ಕಿರಣ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ವಿಚಾರಣೆ ವೇಳೆ ಕೊಲೆ ಮಾಡಿದ್ದು ಒಬ್ಬನೇ ಎಂಬುದು ಬಯಲಿಗೆ ಬಂದಿದ್ದು, ಮಾಜಿ ಕಾರು ಚಾಲಕ ಕಿರಣ್ ಎಂಬಾತನೇ ಪ್ರತಿಮಾ ಅವರನ್ನು ಕೊಲೆ ಮಾಡಿದ್ದಾನೆ ಎಂಬುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಬಹಿರಂಗವಾಗಿದೆ.
ಪ್ರತಿಮಾ ಅವರನ್ನು ಕೊಲೆಗೈದು ಆರೋಪಿ ಕಿರಣ್ ಚಾಮರಾಜನಗರಕ್ಕೆ ಪರಾರಿಯಾಗಿದ್ದ. ಮೊಬೈಲ್ ಲೋಕೆಷನ್ ಆಧರಿಸಿ ಆರೋಪಿ ಪತ್ತೆ ಮಾಡಿದ ಸುಬ್ರಮಣ್ಯಪುರ ಪೊಲೀಸರು ಆತನನ್ನು ಬಂಧಿಸಿ, ಬೆಂಗಳೂರಿಗೆ ಕರೆತಂದಿದ್ದಾರೆ.
ವಿಚಾರಣೆ ವೇಳೆ ಆರೋಪಿ ಕಿರಣ್ ತಪ್ಪೊಪ್ಪಿಕೊಂಡಿದ್ದು, ಕೆಲಸದಿಂದ ವಜಾಗೊಳಿಸಿರುವುದಕ್ಕೆ ಸಿಟ್ಟಾಗಿ ಅವರನ್ನು ಕೊಲೆ ಮಾಡಿರುವುದಾಗಿ ತಿಳಿಸಿದ್ದಾನೆ. ಸದ್ಯ ಸುಬ್ರಮಣ್ಯಪುರ ಠಾಣೆಯಲ್ಲಿ ಆರೋಪಿ ಕಿರಣ್ ವಿಚಾರಣೆ ನಡೆಸಲಾಗುತ್ತಿದೆ. ನಂತರ ನ್ಯಾಯಾಲಯಕ್ಕೆ ಹಾಜರು ಪಡಿಸಲು ಪೊಲೀಸರು ಸಿದ್ದತೆ ನಡೆಸಿದ್ದಾರೆ.
ಕೆಲ ವಿಚಾರಗಳಿಗೆ ಪ್ರತಿಮಾ ಮತ್ತು ಕಿರಣ್ ನಡುವೆ ಭಿನ್ನಾಭಿಪ್ರಾಯ ಬಂದಿತ್ತು. ಹೀಗಾಗಿ ಒಂದು ವಾರದ ಹಿಂದೆ ಆತನನ್ನು ಪ್ರತಿಮಾ ಕೆಲಸದಿಂದ ತೆಗೆದು ಹಾಕಿದ್ದರು. ಈ ಬಗ್ಗೆ ಪ್ರತಿಮಾ ಮೇಲೆ ಕಿರಣ್ ಕೋಪಗೊಂಡಿದ್ದ, ಹೀಗಾಗಿ ಮನೆಗೆ ಬಂದು ಕೊಲೆ ಮಾಡಿ ತೆರಳಿದ್ದ, ಸದ್ಯ ಬಂಧನವಾಗಿದ್ದು ಹೆಚ್ಚಿನ ವಿಚಾರಣೆ ನಡೆಸಲಾಗುತ್ತಿದೆ.
ಕಳೆದ ಐದು ವರ್ಷಗಳಿಂದ ಕಿರಣ್ ಗುತ್ತಿಗೆ ಆಧಾರದಲ್ಲಿ ಗಣಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ, ಈತನ ತಂದೆ ಸುರೇಶ್ ಕೂಡ ಈ ಹಿಂದೆ ಇದೇ ಇಲಾಖೆಯಲ್ಲಿ ಚಾಲಕರಾಗಿದ್ದರು.
ಪ್ರತಿಮಾ ಹತ್ಯೆಗೆ ಅಕ್ರಮ ಕಲ್ಲು ಗಣಿಗಾರಿಕೆ ತಡೆದಿದ್ದು ಕಾರಣವೆಂದು ಮೇಲ್ನೋಟಕ್ಕೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆದಿತ್ತು. ಇದೀಗ ಚಾಲಕನೇ ಕೊಲೆಗೆ ಕಾರಣ ಎಂದು ಸ್ಪಷ್ಟವಾಗಿದೆ. ಪ್ರತಿಮಾ ಇಲಾಖೆಯಲ್ಲಿ ಒಳ್ಳೆಯ, ದಕ್ಷ, ಪ್ರಾಮಾಣಿಕ ಅಧಿಕಾರಿಯೆಂಬ ಹೆಸರು ಪಡೆದಿದ್ದರು.