ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ದೀಪಾವಳಿಯ ದೀಪಾಲಂಕಾರಕ್ಕೆ ವಿದ್ಯುತ್ ಕದ್ದ ಆರೋಪದಲ್ಲಿ ಅವರ ವಿರುದ್ಧ ಎಫ್ ಐಆರ್ ದಾಖಲಾದ ಬೆನ್ನಲ್ಲೇ, ಈಗ ಅವರ ವಿರುದ್ಧ ಕಾಂಗ್ರೆಸ್ ಪೋಸ್ಟರ್ ವಾರ್ ಶುರು ಮಾಡಿದೆ.
ಜೆಡಿಎಸ್ ಕಚೇರಿಯ ಕಾಂಪೌಂಡ್ ಗಳಿಗೆ ವಿದ್ಯುತ್ ಕಳ್ಳ ಕುಮಾರಸ್ವಾಮಿ ಎಂಬುದಾಗಿ ಕೈ ಕಾರ್ಯಕರ್ತರು ಪೋಸ್ಟರ್ ಅಂಟಿಸಿದ್ದಾರೆ
ಜೆಡಿಎಸ್ ಕಚೇರಿಯ ಗೋಡೆಗೆ ಕಾಂಗ್ರೆಸ್ ಅಂಟಿಸಿದೆ ಎನ್ನಲಾದ ಪೋಸ್ಟರ್ ಗಳು ಈಗ ಎಲ್ಲೆಡೆ ವೈರಲ್ ಆಗಿದ್ದು, ಅದರಲ್ಲಿ ವಿದ್ಯುತ್ ಕಳ್ಳ ಕುಮಾರಸ್ವಾಮಿ ಎಂದು ಬರೆಯಲಾಗಿದ್ದು,ಇನ್ನೊಂದೆಡೆ ಕಾಂಗ್ರೆಸ್ ಗ್ಯಾರಂಟಿ 200 ಯೂನಿಟ್ ಉಚಿತವಾಗಿದೆ ಎಂದು ಬರೆಯಲಾಗಿದೆ.
ಇದಷ್ಟೇ ಅಲ್ಲದೇ 200 ಯೂನಿಟ್ ಉಚಿತ ವಿದ್ಯುತ್ ಕುರಿತು ಮಾತನಾಡಿರುವ ಹೆಚ್ ಡಿಕೆಗೆ ಟಾಂಗ್ ಎನ್ನುವಂತೆ ಕುಮಾರಸ್ವಾಮಿಯವರೇ 200 ಯೂನಿಟ್ ಉಚಿತವಾಗಿದೆ. ನೆನಪಿಟ್ಟುಕೊಳ್ಳಿ ಹೆಚ್ಚು ಕದಿಯಬೇಡಿ ಎಂಬುದಾಗಿ ಲೇವಡಿ ಮಾಡಿದ್ದಾರೆ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿಯವರು ತಮ್ಮ ಬೆಂಗಳೂರಿನ ಜೆಪಿ ನಗರದಲ್ಲಿರುವಂತ ನಿವಾಸಕ್ಕೆ ದೀಪಾವಳಿ ಅಲಂಕಾರಕ್ಕೆ ವಿದ್ಯುತ್ ಸಂಪರ್ಕವನ್ನು ಅಕ್ರಮವಾಗಿ ಪಡೆದಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಆರೋಪದ ಬಳಿಕ ಎಚ್ಚೆತ್ತ ಬೆಸ್ಕಾಂ ಜಾಗೃತದಳದ ಅಧಿಕಾರಿಗಳು ಅವರ ನಿವಾಸಕ್ಕೆ ಭೇಟಿ ನೀಡಿ, ಇದನ್ನು ಖಚಿತ ಪಡಿಸಿದರು. ಜೊತೆಗೆ ವಿದ್ಯುತ್ ಕದ್ದ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಹೆಚ್ ಡಿಕೆ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.