ಬೆಂಗಳೂರು: ಕಳೆದ ಒಂದು ವರ್ಷದಿಂದ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಗೆ ಕಾರ್ಯಕರ್ತರಿಂದ ತೀವೃ ಒತ್ತಡದ ನಡುವೆ ಕೊನೆಗೂ ಬಿಜೆಪಿ ಹೈಕಮಾಂಡ್ ನೂತನ ರಾಜ್ಯಾಧ್ಯಕ್ಷರನ್ನಾಗಿ ಬಿ.ವೈ ವಿಜಯೇಂದ್ರ ಅವರನ್ನು ನೇಮಕ ಮಾಡಿದ್ದಾರೆ. ವಿಜಯೇಂದ್ರ ಬುಧವಾರ ರಾಜ್ಯಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಇದೀಗ ಕಳೆದ 7 ತಿಂಗಳಿನಿAದ ಬಾಕಿ ಉಳಿದಿರುವ ಪ್ರತಿಪಕ್ಷ ನಾಯಕನ ಆಯ್ಕೆ ವಿಚಾರ ಮತ್ತೆ ಚರ್ಚೆಗೆ ಬಂದಿದೆ.
ನವೆAಬರ್ 17ರಂದು ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಲಾಗುವುದು ಎಂದು ವಿಜಯೇಂದ್ರ ಹೇಳಿಕೆ ನೀಡಿರುವ ಬೆನ್ನಲ್ಲೇ ವಿರೋಧ ಪಕ್ಷದ ನಾಯಕ ಯಾರು ಎನ್ನುವ ಕುತೂಹಲ ಮೂಡಿದೆ.
ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಬಣ ರಾಜಕೀಯ ಹಾಗೂ ಇತರೇ ರಾಜಕೀಯ ವಿಚಾರಗಳಿಂದ ಬಿಜೆಪಿಗೆ ತೀವೃ ಮುಖಭಂಗ ಆಗಿದ್ದ ಹಿನ್ನಲೆಯಲ್ಲಿ ಬಿಜೆಪಿ ಹೈಕಮಾಂಡ್ ವಿರೋಧ ಪಕ್ಷದ ನಾಯಕನ ಆಯ್ಕೆಯನ್ನು ಮಾಡದೇ ಮುಂದೂಡಿತ್ತು. ಈ ಮೂಲಕ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಪರೋಕ್ಷ ಎಚ್ಚರಿಕೆ ನೀಡಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಅವರನ್ನು ಕಡೆಗಣಿಸಿ ಬಿಜೆಪಿ ಪಕ್ಷ ಸಂಘಟನೆ ಕಷ್ಟಸಾಧ್ಯ ಎನ್ನುವ ವಿಚಾರ ಕೇಂದ್ರ ನಾಯಕರಿಗೂ ಗೊತ್ತಿರುವ ಹಿನ್ನಲೆಯಲ್ಲಿ ವಿಜಯೇಂದ್ರ ಅವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿ ಯುವ ನಾಯಕತ್ವಕ್ಕೆ ಮನ್ನಣೆ ನೀಡಲಾಗಿದೆ. ಆದರೆ ಇದು ಅಚ್ಚರಿಯ ಆಯ್ಕೆ ಎಂದು ವಿಜಯೇಂದ್ರ ಹೇಳಿಕೆ ನೀಡಿದ್ದರು.
ರಾಜ್ಯದಲ್ಲಿ ಪ್ರತಿಪಕ್ಷ ನಾಯಕನ್ನೂ ಆಯ್ಕೆ ಮಾಡಲಾಗದೇ ಬಿಜೆಪಿ ಒದ್ದಾಡುತ್ತಿದೆ ಎಂದು ಕಾಂಗ್ರೆಸ್ ನಿರಂತರವಾಗಿ ಗೇಲಿ ಮಾಡುತ್ತಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ನೇಮಕ ಬೆನ್ನಲ್ಲೇ ಇದೀಗ ಪ್ರತಿಪಕ್ಷ ನಾಯಕನ ಆಯ್ಕೆಗೆ ಬಿಜೆಪಿ ಹೈಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ರಚನೆಯಾದ ಬಳಿಕ ಸರ್ಕಾರವನ್ನು ಹಣಿಯಲು ಒಬ್ಬ ಸಮರ್ಥ ವಿರೋಧ ಪಕ್ಷ ನಾಯಕ ಬೇಕೆನ್ನುವುದು ಕಾರ್ಯಕರ್ತರ ಬೇಡಿಕೆಯಾಗಿತ್ತು ಅದಕ್ಕಾಗಿ ಬಿಜೆಪಿ ಫೈರ್ ಬ್ರಾಂಡ್ ಬಸನ ಗೌಡ ಪಾಟೀಲ ಯತ್ನಾಳ್ ಅವರನ್ನೇ ಆಯ್ಕೆ ಮಾಡಬೇಕೆಂದು ಅವರ ಬೆಂಬಲಿಗರು ಹಾಗೂ ಕಾರ್ಯಕರ್ತರು ಬಿಗಿಪಟ್ಟು ಹಿಡಿದಿದ್ದರು.ಆದರೆ ಯಡಿಯೂರಪ್ಪ ಅವರ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರುತ್ತಿದ್ದ ಯತ್ನಾಳ್ , ಯಡಿಯೂರಪ್ಪ ಅವರ ವಿರೋಧ ಕಟ್ಟಿಕೊಂಡು ವಿಪಕ್ಷ ನಾಯಕನಾಗುವುದು ಕೂಡ ಅಷ್ಟು ಸುಲಭವಲ್ಲ ಎನ್ನುವ ಲೆಕ್ಕಾಚಾರವೂ ನಡೆದಿದೆ. ಇತ್ತ ಬಿಜೆಪಿಯ ಅಶ್ವಥ ನಾರಾಯಣ, ಆರ್. ಅಶೋಕ್ ಹೆಸರೂ ಕೂಡ ಪ್ರಸ್ತಾಪವಾಗುತ್ತಿದೆ, ಇದಲ್ಲದೇ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕೂಡ ಯಡಿಯೂರಪ್ಪ ಬಣದಲ್ಲಿ ಗುರುತಿಸಿಕೊಂಡ ಹಿನ್ನಲೆಯಲ್ಲಿ ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಿದ್ದಂತೆಯೇ ಅವರಿಗೆ ಶುಭ ಹಾರೈಸಿದ್ದು ಮಾತ್ರವಲ್ಲದೇ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ.ಆದ್ದರಿಂದ ಹರೀಶ್ ಪೂಂಜಾ ಅವರು ಆಯ್ಕೆ ಅಲ್ಲಗೆಳೆಯುವಂತಿಲ್ಲ. ಇದಲ್ಲದೇ ಬಿಜೆಪಿಯ ಇನ್ನೋರ್ವ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಕಾರ್ಕಳದ ವಿ.ಸುನಿಲ್ ಕುಮಾರ್ ಅವರ ಹೆಸರೂ ಕೇಳಿ ಬರುತ್ತಿದೆ. ಸರ್ಕಾರ ಹಾಗೂ ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ ಸಾಕಷ್ಟು ಅನುಭವ ಇರುವ ಸುನಿಲ್ ಕುಮಾರ್ ಅವರಿಗೆ ಹೈಕಮಾಂಡ್ ಮಟ್ಟದಲ್ಲಿ ಪ್ರಭಾವ ಇರುವ ಕಾರಣದಿಂದ ವಿಪಕ್ಷ ನಾಯಕ ಸ್ಥಾನಕ್ಕೆ ಅಚ್ಚರಿಯ ಆಯ್ಕೆ ಸಾಧ್ಯತೆ ಅಲ್ಲಗಳೆಯುವಂತಿಲ್ಲ.
ಪ್ರಸ್ತುತ ರಾಜ್ಯಾಧ್ಯಕ್ಷ ಹುದ್ದೆ ಲಿಂಗಾಯತ ಸಮುದಾಯಕ್ಕೆ ನೀಡಿರುವ ಕಾರಣದಿಂದ ವಿಪಕ್ಷ ಸ್ಥಾನಕ್ಕೆ ಒಕ್ಕಲಿಗ ಅಥವಾ ಹಿಂದುಳಿದ ವರ್ಗಕ್ಕೆ ನೀಡುವುದು ಬಹುತೇಕ ಖಚಿತವಾಗಿದೆ. ಮೂಲಗಳ ಪ್ರಕಾರ ಬಸನಗೌಡ ಪಾಟೀಲ್ ಯತ್ನಾಳ್, ಆರ್. ಅಶೋಕ್ ಅಥವಾ ಸುನಿಲ್ ಕುಮಾರ್ ಅವರಿಗೆ ವಿಪಕ್ಷ ಸ್ಥಾನ ನೀಡುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.ಸಧ್ಯಕ್ಕೆ ವಿಪಕ್ಷ ನಾಯಕನ ಆಯ್ಕೆ ಅಷ್ಟೊಂದು ಸುಲಭದ ಮಾತಲ್ಲ, ಯಾಕೆಂದರೆ ವಿಜಯೇಂದ್ರ ಆಯ್ಕೆ ಯಡಿಯೂರಪ್ಪ ವಿರೋಧಿ ಬಣದ ಆಕ್ರೋಶಕ್ಕೂ ಕಾರಣವಾಗಿದೆ.ಈ ವಿಚಾರದಲ್ಲಿ ಹಲವು ನಾಯಕರು ಬಹಿರಂಗವಾಗಿಯೇ ಅಸಮಾಧಾನ ತೋಡಿಕೊಂಡಿದ್ದರು.ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಅವರ ವಿರೋಧಿ ಬಣದ ನಾಯಕರನ್ನು ವಿಶ್ವಾಸಕ್ಕೆ ಪಡೆಯುವ ದೊಡ್ಡ ಸವಾಲು ವಿಜಯೇಂದ್ರ ಅವರ ಮುಂದಿದೆ.ಈ ಭಿನ್ನಮತವನ್ನು ಶಮನಗೊಳಿಸುವ ಹಿನ್ನಲೆಯಲ್ಲಿ ವಿರೋಧಿ ಬಣದ ನಾಯಕರಲ್ಲಿ ಒಬ್ಬರನ್ನು ಪ್ರತಿಪಕ್ಷ ನಾಯಕರಾಗಿ ಆಯ್ಕೆ ಮಾಡಿ ವಿರೋಧಿಗಳನ್ನು ಹಣಿಯುವ ಪ್ರಯತ್ನ ನಡೆಸಿದರೂ ಅಚ್ಚರಿಯಿಲ್ಲ.
ಸಧ್ಯದ ಮಟ್ಟಿಗೆ ಕೇಂದ್ರ ಬಿಜೆಪಿ ನಾಯಕರ ಕೃಪಾಕಟಾಕ್ಷ ಯಡಿಯೂರಪ್ಪ ಅವರ ಮೇಲಿರುವ ಕಾರಣದಿಂದ ವಿಪಕ್ಷ ನಾಯಕನ ಆಯ್ಕೆಯಲ್ಲಿ ಯಡಿಯೂರಪ್ಪ ಅವರ ಅಭಿಪ್ರಾಯವೂ ಮುಖ್ಯವಾಗಿದೆ. ಬಿಜೆಪಿ ಹೈಕಮಾಂಡ್ ಕೂಡ ಯಡಿಯೂರಪ್ಪ ಸೂಚಿಸುವ ಹೆಸರನ್ನೇ ಪ್ರತಿಪಕ್ಷ ಸ್ಥಾನಕ್ಕೆ ಅಂತಿಮಗೊಳಿಸಲಿದೆ ಎನ್ನಲಾಗುತ್ತಿದೆ.
ಈ ಎಲ್ಲಾ ಪ್ರಶ್ನೆಗಳಿಗೆ ನವೆಂಬರ್17 ರ ಶುಕ್ರವಾರ ಉತ್ತರ ಸಿಗಲಿದ್ದು,ಅಂದು ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಂದೇ ವಿಪಕ್ಷ ನಾಯಕ ಹುದ್ದೆಗೆ ಅಭ್ಯರ್ಥಿ ಆಯ್ಕೆ ಅಂತಿಮವಾಗಲಿದೆ