ಬೆಂಗಳೂರು: ಬಿಜೆಪಿಗೆ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿವೈ ವಿಜಯೇಂದ್ರ ಅವರು ಅಧಿಕಾರ ಸ್ವೀಕರಿಸಿದ್ದಾರೆ. ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಪಕ್ಷದ ಧ್ವಜ ನೀಡುವ ಮೂಲಕ ವಿಜಯೇಂದ್ರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಬಿಜೆಪಿ ಕಚೇರಿಯಲ್ಲಿ ಬೆಳಗ್ಗೆಯಿಂದಲೇ ಪೂಜೆ ಹೋಮ, ಹವನ ನಡೆದಿದ್ದು, ವಿಜಯೇಂದ್ರ ಅವರು ಭಾಗಿಯಾದರು. ಹೋಮ ಹವನ ಪೂರ್ಣಾಹುತಿಯಲ್ಲಿ ತೊಡಗಿರುವ ವಿಜಯೇಂದ್ರ ಅವರಿಗೆ ನಿಕಟಪೂರ್ವ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಸಾಥ್ ನೀಡಿದರು.
ಕಾರ್ಯಕ್ರಮದ ಬಳಿಕ ಮಾತನಾಡಿದ ವಿಜಯೇಂದ್ರ ಪಿಎಂ ಮೋದಿ, ಅಮಿತ್ ಶಾ, ನಡ್ಡಾ ಸಂತೋಷ್ ಅವರ ಆಶಿರ್ವಾದದಿಂದ ನನಗೆ ಜವಾಬ್ದಾರಿ ನೀಡಿದ್ದಾರೆ. ನೀವು ನೀಡಿದ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸುವೆ. ಜೀವನದಲ್ಲಿ ಮೊದಲ ಬಾರಿಗೆ ಶಾಸಕ ಆಗಲು ಸಹಕರಿಸಿದ ಶಿಕಾರಿಪುರ ಜನತೆಗೆ ಸಂಘದ ಪ್ರಮುಖರಿಗೆ ಅಭಿನಂದನೆಗಳು. ಸಂಘ ಪರಿವಾರದ ನಾಯಕರಿಗೆ ಧನ್ಯವಾದಗಳು ಎಂದರು.
ಮುAದಿನ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನ ಗೆಲ್ಲುವ ಮೂಲಕ ಮೋದಿ ಪ್ರಧಾನಿ ಆಗಬೇಕು. ಇದು ದೇಶಕ್ಕಾಗಿ. ವಿಧಾನಸಭೆಯಲ್ಲಿ ಸ್ವಲ್ಪ ಹಿನ್ನಡೆ ಆಗಿದೆ. ಯಡಿಯೂರಪ್ಪ ನಡೆಯನ್ನು ಹತ್ತಿರದಿಂದ ನೋಡಿದ್ದೇನೆ. ಅನೇಕ ಹಿರಿಯರು ಇರುವಾಗ ನನಗೆ ಜವಾಬ್ದಾರಿ ನೀಡಿದ್ದಾರೆ. ಆ ಹುದ್ದೆಯ ಜವಬ್ದಾರಿಯ ಅರಿವಿದೆ. ನಾಯಕರು, ಕಾರ್ಯಕರ್ತರು ಯಾರೂ ಕೂಡ ತಲೆ ತಗ್ಗಿಸಿ ಹೊಕಗದಂತೆ ನೋಡಿಕೊಳ್ಳುತ್ತೇನೆ ಎಂದರು.
ಮಾಜಿ ಸಿಎಂ ಯಡಿಯೂರಪ್ಪ ಮಾತನಾಡಿ, ಅಮಿತ್ ಶಾರನ್ನು ಕರೆಸಿ ಒಂದು ಲಕ್ಷ ಜನ ಸೇರಿಸಿ ದೊಡ್ಡ ಸಮಾವೇಶಕ್ಕೆ ಚಿಂತನೆ ಮಾಡಿದ್ದೇವೆ. ಮೋದಿ, ಶಾ, ನಡ್ಡಾ ಆದೇಶದಂತೆ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ವಿಜಯೇಂದ್ರ ಅಧ್ಯಕ್ಷರಾದ ಬಳಿಕ ಕಾರ್ಯಕರ್ತರಲ್ಲಿ ಉತ್ಸಾಹ ಕಾಣುತ್ತಿದೆ. ಎಲ್ಲಾ ನಾಯಕರು ವಿಜಯೇಂದ್ರಗೆ ಆಶೀರ್ವಾದ ಮಾಡಿದ್ದಕ್ಕೆ ಸಂತೋಷವಾಗಿದೆ ಎಂದರು.
ಈಶ್ವರಪ್ಪ, ಶ್ರೀರಾಮುಲು, ರಾಮಚಂದ್ರೆ ಗೌಡ, ಕಾರಜೋಳ, ಬೈರತಿ ಬಸವರಾಜ್ ಬೈರತಿ ಡಿ ಹೆಚ್ ಶಂಕರ್ ಮೂರ್ತಿ, ಮಾಜಿ ಸಿಎಂ ಬೊಮ್ಮಾಯಿ, ಪಕ್ಷದ ಹಿರಿಯ ನಾಯಕರು, ಹಾಲಿ ಶಾಸಕರು, ಬಿಜೆಪಿ ಮುಖಂಡರು, ಕಾರ್ಯಕರ್ತರು ಸೇರಿ ಹಲವು ಮಂದಿ ಕಾರ್ಯಕ್ರಮದಲ್ಲಿ ಉಪಸ್ಥಿತಿಯಿದ್ದರು.
ಕಚೇರಿ ಆವರಣದಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು, ಡೋಲು, ಚೆಂಡೆ, ವಾದ್ಯಗಳನ್ನು ನುಡಿಸಿ ಕಾರ್ಯಕರ್ತರು ಹೆಜ್ಜೆ ಹಾಕಿ ಸಂಭ್ರಮಿದರು. ವೀರಗಾಸೆ ಕುಣಿತ ಹಾಗೂ ವಿವಿಧ ಕಲಾಪ್ರಕಾರಗಳು ಗಮನ ಸೆಳೆಯಿತು.