ಉಡುಪಿ: ಪ್ರೀತಿ ನಿರಾಕರಿಸಿದ ಕಾರಣಕ್ಕಾಗಿ ಆರೋಪಿ ಅರುಣ್ ಚೌಗುಲೆ ಎಂಬಾತ ತಾಯಿ ಹಾಗೂ ಮೂವರು ಮಕ್ಕಳು ಸೇರಿದಂತೆ ನಾಲ್ವರ ಬರ್ಬರ ಹತ್ಯೆ ಪ್ರಕರಣದಲ್ಲಿ ಪೊಲೀಸರು ಗುರುವಾರ ಆರೋಪಿಯನ್ನು ಸ್ಥಳ ಮಹಜರಿಗೆ ಕರೆತಂದಾಗ ನೇಜಾರಿನ ತೃಪ್ತಿನಗರದಲ್ಲಿ ಸ್ಥಳೀಯರು ಅರೋಪಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿ,ಆತನನ್ನು ತಮಗೆ ಒಪ್ಪಿಸುವಂತೆ ಪ್ರತಿಭಟನೆ ನಡೆಸಿದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಪೊಲೀಸರು ಆರೋಪಿಯನ್ನು ಸ್ಥಳ ಮಹಜರು ನಡೆಸಲು ಅಪರಾಧ ನಡೆದ ಸ್ಥಳಕ್ಕೆ ಕರೆತರುತ್ತಿದ್ದಂತೆಯೇ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಸ್ಥಳೀಯರು ಆರೋಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಪ್ರತಿಭಟನೆ ನಡೆಸಿದರು. ಉದ್ರಿಕ್ತ ಗುಂಪನ್ನು ಚದುರಿಸಲು ಮತ್ತು ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಬೇಕಾಯಿತು. ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏರ್‌ಲೈನ್ಸ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ 39 ವರ್ಷದ ಪ್ರವೀಣ್ ಅರುಣ್ ಚೌಗುಲೆ ಯನ್ನು ಕೊಲೆ ನಡೆದ ಮನೆಗೆ ಕರೆದೊಯ್ದದ್ದಾಗ ಜಮಾಯಿಸಿದ ಸ್ಥಳೀಯರು ಆತನನ್ನು ತಮಗೆ ಒಪ್ಪಿಸುವಂತೆ ಒತ್ತಾಯಿಸಿದರು.
ಆತನಿಗಾಗಿ ಬೆಳಗ್ಗೆಯಿಂದಲೇ ಸ್ಥಳೀಯರು ಕಾದು ಕುಳಿತಿದ್ದರು.
ಸಂಜೆ 4.45ರ ಸುಮಾರಿಗೆ ಮಹಜರು ಮುಗಿಸಿ ಆರೋಪಿಯನ್ನು ಕರೆದುಕೊಂಡು ಹೋಗುತ್ತಿದ್ದಾಗ ಸಾರ್ವಜನಿಕರು ಆರೋಪಿ ವಿರುದ್ಧ ಘೋಷಣೆ ಕೂಗುವ ಮೂಲಕ ವಾಹನ ತಡೆಯಲು ಯತ್ನಿಸಿದರು. ಪರಿಸ್ಥಿತಿ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಹರಸಾಹಸಪಟ್ಟು ಗುಂಪನ್ನು ಚದುರಿಸಲು ಲಘು ಲಾಠಿ ಪ್ರಹಾರ ನಡೆಸಿದರು. ಆರೋಪಿಯನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ತ್ವರಿತ ಕ್ರಮ ಕೈಗೊಳ್ಳಲಾಯಿತು. ಸದ್ಯ ಪರಿಸ್ಥಿತಿ ಶಾಂತಿಯುತವಾಗಿದ್ದು, ಪ್ರದೇಶದಲ್ಲಿ ಶಾಂತಿ ನೆಲೆಸುವಂತೆ ಮಾಡಲು ಅಧಿಕಾರಿಗಳು ಸ್ಥಳೀಯ ಸಮುದಾಯದ ಹಿರಿಯರೊಂದಿಗೆ ಚರ್ಚೆ ನಡೆಸಿದರು.
ಇದೇ ವೇಳೆ ಆರೋಪಿಯನ್ನು ಬಂಧಿಸುವಲ್ಲಿ ಕ್ಷಿಪ್ರ ಕ್ರಮ ಕೈಗೊಂಡ ಪೊಲೀಸರಿಗೆ ಕುಟುಂಬಸ್ಥರು ಧನ್ಯವಾದ ಅರ್ಪಿಸಿದ್ದಾರೆ. ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ಕೈಗೆತ್ತಿಕೊಂಡು ಆರೋಪಿಗಳಿಗೆ ಒಂದು ವರ್ಷದೊಳಗೆ ಮರಣದಂಡನೆ ವಿಧಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಅಮಾನುಷ ಹತ್ಯೆಯ ನಂತರ ಆ ಪ್ರದೇಶದ ಹಲವು ಹಿಂದೂ ಕುಟುಂಬಗಳು ದೀಪಾವಳಿ ಆಚರಿಸಲಿಲ್ಲ. ಬಂಧಿತ ವ್ಯಕ್ತಿ ತನಿಖೆಗೆ ಸಹಕರಿಸುತ್ತಿದ್ದು, ತನಿಖೆ ಮುಂದುವರಿದಂತೆ ಕೊಲೆಯ ಹಿಂದಿನ ನಿಖರ ಕಾರಣ ತಿಳಿಯಲಿದೆ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕೆ ತಿಳಿಸಿದ್ದಾರೆ.




