ಬೆಂಗಳೂರು:ರಾಜ್ಯ ಕಾಂಗ್ರೆಸ್ ಸರ್ಕಾರ ವರ್ಗಾವಣೆ ದಂಧೆಯ ಮೂಲಕ ಭ್ರಷ್ಟಾಚಾರದಲ್ಲಿ ಮುಳುಗಿದೆ, ಈ ನಿಟ್ಟಿನಲ್ಲಿ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದೆಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.
ಸರ್ಕಾರಿ ಹುದ್ದೆ ವರ್ಗಾವಣೆ ದಂಧೆಗೆ ಸಂಬಂಧಿಸಿದ ನಗದು ಹಣದ ಕುರಿತು ಸರ್ಕಾರದ ವಿರುದ್ಧ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಈ ವಿಚಾರವನ್ನು ಇಲ್ಲಿಗೇ ಕೈಬಿಡುವುದಿಲ್ಲ. ಗುರುವಾರ, ಯತೀಂದ್ರ ಸಿದ್ದರಾಮಯ್ಯ ಅವರು ತಮ್ಮ ತಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗಿನ ದೂರವಾಣಿ ಸಂಭಾಷಣೆಯ ವೀಡಿಯೊ ತುಣುಕನ್ನು ಹಂಚಿಕೊಂಡಿದ್ದಾರೆ, ಅಲ್ಲಿ ಅವರು ಪಟ್ಟಿ ಕುರಿತು ಮಾತನಾಡುವುದನ್ನು ಕೇಳಬಹುದು, ಅವರ ಮೊಬೈಲ್ ಸಂಭಾಷಣೆ ವರ್ಗಾವಣೆ ದಂಧೆಗೆ ಸ್ಪಷ್ಟ ಸಾಕ್ಷಿಯಾಗಿದೆ ಎಂದು ಆರೋಪಿಸಿದರು. ಈ ಪಟ್ಟಿಯು ವರುಣಾ ಕ್ಷೇತ್ರದ ಶಾಲಾ ಕಟ್ಟಡ ದುರಸ್ತಿಗೆ ಬಳಸಬೇಕಾದ ಸಿಎಸ್‌ಆರ್ ನಿಧಿಗೆ ಸಂಬಂಧಿಸಿದೆ ಎಂದು ನಂತರ ಸರ್ಕಾರ ಸಮರ್ಥಿಸುವ ಪ್ರಯತ್ನ ಮಾಡಿದೆ,ಆದರೆ ಅವರು ಕೇವಲ 5 ಶಾಲೆಗಳನ್ನು ಏಕೆ ಆಯ್ಕೆ ಮಾಡಿದರು ಮತ್ತು ಹೆಚ್ಚಿನದನ್ನು ಆಯ್ಕೆ ಮಾಡಲಿಲ್ಲ ಎನ್ನುವುದನ್ನು ಕನಿಷ್ಠ ಮನವರಿಕೆ ಮಾಡಿ, ಹಾಗೂ ಶಾಲಾ ಕಟ್ಟಡ ದುರಸ್ತಿ ಎನ್ನುವ ಸಣ್ಣ ವಿಚಾರಕ್ಕೆ ಸಿಎಂ ಜತೆ ಮಾತನಾಡುವ ತುರ್ತು ಅನಿವಾರ್ಯತೆ ಏನಿತ್ತು ಎಂದು ಅವರು ಪ್ರಶ್ನಿಸಿದರು.
ಇದಲ್ಲದೇ ನಗರದಲ್ಲಿನ ಲುಲು ಮಾಲ್‌ಗಾಗಿ ಅಕ್ರಮವಾಗಿ ಭೂ ಸ್ವಾಧೀನಪಡಿಸಿಕೊಳ್ಳುವಲ್ಲಿ ಕಾಂಗ್ರೆಸ್ ಮುಖಂಡರ ಕೈವಾಡವಿದೆ ಎಂದು ಆರೋಪಿಸಿ ಉಪ ಸಿಎಂ ಡಿ ಕೆ ಶಿವಕುಮಾರ್ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು. ಇದು ಮಿನರ್ವ ಮಿಲ್‌ಗೆ ಮಂಜೂರು ಮಾಡಲಾದ 24 ಎಕರೆ ಬಿ ಖರಾಬ್ ಭೂಮಿ. ಈ ಭೂಮಿಯನ್ನು ಅಕ್ರಮವಾಗಿ ಕಬಳಿಸಲು ದಾಖಲೆಗಳನ್ನು ನಾಶಪಡಿಸಲಾಗಿದೆ ಎಂದು ಅವರು ಆರೋಪಿಸಿದರು.








