ಬೆಂಗಳೂರು :ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾತಿಗಣತಿ ವರದಿ ವಿಚಾರದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ತೀವೃ ಜಟಾಪಟಿ ನಡೆದಿತ್ತು. ಜಾತಿಗಣತಿಯನ್ನು ಬಿಜೆಪಿ ವಿರೋಧಿಸಿದರೆ ಕಾಂಗ್ರೆಸ್ ನಾಯಕರು ಜಾತಿಗಣತಿಯನ್ನು ಬೆಂಬಲಿಸಿದ್ದಾರೆ.ಆದರೆ ಇದೀಗ ಜಾತಿಗಣತಿ ವರದಿ ವಿಚಾರ ದಲ್ಲಿ ಕಾಂಗ್ರೆಸ್ ಪಕ್ಷದಲ್ಲೇ ಒಡಕು ಮೂಡಿದ್ದು, ಜಾತಿಗಣತಿ ವರದಿಗೆ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರಿಂದಲೇ ವಿರೋಧ ವ್ಯಕ್ತವಾಗುತ್ತಿದ್ದು,ವರದಿ ತಿರಸ್ಕರಿಸುವ ಪತ್ರಕ್ಕೆ ಸಹಿ ಹಾಕಿರುವ ವಿಚಾರ ಬಹಿರಂಗವಾಗಿದೆ, ಇನ್ನೊಂದು ಕಡೆ ದೇಶಾದ್ಯಂತ ಜಾತಿಗಣತಿ ವರದಿ ನಡೆದು ಅವಕಾಶ ವಂಚಿತ ಸಮುದಾಯಗಳಿಗೆ ನ್ಯಾಯ ಕೊಡಿಸುವ ನನ್ನ ನಿರ್ಧಾರ ಅಚಲವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಜಾತಿಗಣತಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಟ್ವೀಟ್ ಮಾಡಿದ್ದಾರೆ. ನಮ್ಮ ಹೆಮ್ಮೆಯ ನಾಯಕರಾದ ರಾಹುಲ್ ಗಾಂಧಿಯವರ ನಿಲುವಿಗೆ ನನ್ನ ಪೂರ್ಣ ಸಹಮತವಿದೆ. ದೇಶಾದ್ಯಂತ ಜಾತಿಗಣತಿ ನಡೆದು, ಅದರ ವರದಿಯ ಆಧಾರದ ಮೇಲೆ ಸರ್ವರಿಗೂ ಸಮಪಾಲು ಸರ್ವರಿಗೂ ಸಮಬಾಳು ದಕ್ಕಿದಾಗಲೇ ದೇಶಕ್ಕೆ ದೊರೆತ ಸ್ವಾತಂತ್ರ‍್ಯ ಸಾರ್ಥಕವಾಗಲಿದೆ ಎಂಬುದು ನನ್ನ ಭಾವನೆ.ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ನಡೆಸಿದ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಸ್ವೀಕರಿಸಿ, ಅವಕಾಶಗಳಿಂದ ವಂಚಿತವಾದ ಸಮುದಾಯಗಳಿಗೆ ನ್ಯಾಯ ಕೊಡಿಸುವ ನನ್ನ ನಿರ್ಧಾರ ಅಚಲವಾಗಿದೆ ಎಂದು ಅವರು ಬರೆದುಕೊಂಡಿದ್ದಾರೆ.
ಆದರೆ ಇನ್ನೊಂದು ಕಡೆಗೆ ಜಾತಿ ಗಣತಿ ವರದಿಗೆ ಡಿಸಿಎಂ ಡಿಕೆ ಶಿವಕುಮಾರ ವಿರೋಧಿಸಿದ್ದಾರೆ. ಕರ್ನಾಟಕ ಒಕ್ಕಲಿಗರ ಸಂಘದ ಪದಾಧಿಕಾರಿಗಳು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಭೇಟಿ ಮಾಡಿ, ರಾಜ್ಯದಲ್ಲಿ ಜಾತಿ ಜನಗಣತಿ ವರದಿಯನ್ನು ಬಿಡುಗಡೆ ಮಾಡಬಾರದು. ಆ ವರದಿಯನ್ನು ತಿರಸ್ಕರಿಸುವಂತೆ ಮನವಿ ಮಾಡಿದೆ.ಈ ಮನವಿ ಪತ್ರಕ್ಕೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಒಪ್ಪಿಗೆ ಸೂಚಿಸಿ, ಸಹಿ ಮಾಡಿರೋ ಪತ್ರ ಈಗ ವೈರಲ್ ಆಗಿದೆ.
ಕಾಂತರಾಜ್ ಆಯೋಗದ ಜಾತಿ ಜನಗಣತಿಯ ವರದಿಯನ್ನು ತಿರಸ್ಕರಿಸಬೇಕು ಎಂಬುದಾಗಿ ಪತ್ರದಲ್ಲಿ ಒಕ್ಕಲಿಗರ ಸಂಘವು ಆಗ್ರಹಿಸಿತ್ತು. ಈ ಆಗ್ರಹ ಪತ್ರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸಹಿ ಮಾಡಿ, ತಮ್ಮ ಸಮ್ಮತಿಯನ್ನು ಸೂಚಿಸೋ ಮೂಲಕ, ಖುದ್ದು ಜಾತಿ ಜನಗಣತಿ ವರದಿಗೆ ವಿರೋಧ ವ್ಯಕ್ತ ಪಡಿಸಿರೋದು ಬಯಲಾಗಿದೆ. ಈ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಜಾತಿಗಣತಿ ವಿಚಾರದಲ್ಲಿ ಮುಸುಕಿನ ಗುದ್ದಾಟ ಬಯಲಾದಂತೆ ಆಗಿದೆ.


















