Share this news

ಕಾರ್ಕಳ: ವಿದೇಶದಿಂದ ಕಚ್ಚಾ ಗೇರುಬೀಜ ಆಮದು ಮಾಡುವ ವಿಚಾರದಲ್ಲಿ ಕಾರ್ಕಳ ತಾಲೂಕಿನ ಕಡ್ತಲದ ಗೇರುಬೀಜ ಕಾರ್ಖಾನೆಯ ಉದ್ಯಮಿಗೆ ವಂಚಕರು ಬರೋಬ್ಬರಿ 65 ಲಕ್ಷ ರೂ ಪಂಗನಾಮ ಹಾಕಿದ್ದಾರೆ.
ಕಡ್ತಲದ ತಿರುಮಲ ಗೇರುಬೀಜ ಸಂಸ್ಕರಣಾ ಘಟಕದ ಮಾಲ್ಹಕ ಯೋಗಿಶ್ ಮಲ್ಯ ಎಂಬವರೇ ವಂಚನೆಗೊಳಗಾದವರು. ಕಳೆದ 2022ರ ಜುಲೈ ತಿಂಗಳಿನಲ್ಲಿ ಮಂಗಳೂರಿನ ಟಿಎಂಎ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಗೋಡಂಬಿ ಬೆಳಗಾರರು, ಉದ್ಯಮಿಗಳು ಹಾಗೂ ರಪ್ತುದಾರರ ಸಂಘದ ಸಮಾವೇಶದಲ್ಲಿ ಯೋಗೀಶ್ ಮಲ್ಯ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಗೋಡಂಬಿ ಉದ್ಯಮದಲ್ಲಿ ದಲ್ಲಾಳಿ ಕೆಲಸ ಮಾಡಿಕೊಂಡಿದ್ದ ಆರೋಪಿ ಸದಾಫ್ ಖುರೇಶಿ ಎಂಬಾತ ಇಂಕರ್ ಕೊಮೊಂಡಿಟೀಸ್ ಎಂಬ ಸಂಸ್ಥೆಯ ಪಾಲುದಾರರಾದ ಶೇಖರ್ ಬದಿರೆಡ್ಡಿ ಹಾಗೂ ಪಾಲ ಮಣಿಕಂಠ ರವರ ಪರವಾಗಿ ಭೇಟಿ ಮಾಡಿ ಐವರಿ ಕೋಸ್ಟ್ ಮತ್ತು ನೈಜಿರೀಯಾ ದೇಶದಿಂದ ಕಚ್ಚಾ ಗೋಡಂಬಿಯನ್ನು ಸರಬರಾಜು ಮಾಡುವುದಾಗಿ ನಂಬಿಸಿ ಮಾತುಕತೆ ನಡೆಸಿದ ಬಳಿಕ ಯೋಗೀಶ್ ಮಲ್ಯ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದ್ದರು. ತದನಂತರ ಪ್ರತಿ ಮೆಟ್ರಿಕ್ ಟನ್ ಗೋಡಂಬಿಗೆ 1240 ಡಾಲರ್ ನಂತೆ ಒಟ್ಟು 220 ಮೆಟ್ರಿಕ್ ಟನ್ ಕಚ್ಚಾ ಗೋಡಂಬಿಯನ್ನು 2023ರ ಮಾರ್ಚ್ ನಿಂದ 2023 ರ ಏಪ್ರಿಲ್ 15ರೊಳಗೆ ಕಂಟೇನರ್ ಮೂಲಕ ಮಂಗಳೂರಿನ ಬಂದರಿಗೆ ಪೂರೈಸುವುದಾಗಿ ಒಪ್ಪಂದ ಕರಾರು ಮಾಡಿಕೊಂಡು, ಇದಕ್ಕೆ ಪ್ರತಿಯಾಗಿ 65,94,360 ರೂಪಾಯಿ ಹಣವನ್ನು ಪಡೆದುಕೊಂಡು ಗೇರುಬೀಜ ಪೂರೈಸದೇ ವಂಚನೆ ಮಾಡಿದ್ದಾರೆ ಎಂದು ಯೋಗಿಶ್ ಮಲ್ಯ ಅಜೆಕಾರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply

Your email address will not be published. Required fields are marked *