ಉಡುಪಿ: ಸೂಕ್ತ ಪರವಾನಗಿ ಇಲ್ಲದೇ ಕಲ್ಲು, ಮಣ್ಣು ಸೇರಿದಂತೆ ಕಟ್ಟಡ ಸಾಮಾಗ್ರಿಗಳ ಸಾಗಾಟಕ್ಕೆ ನಿರ್ಬಂಧ ಹೇರಿದ್ದ ಉಡುಪಿ ಎಸ್ಪಿ ಡಾ.ಕೆ ಅರುಣ್ ಕುಮಾರ್ ಅವರ ಈ ನಡೆಗೆ ಶುಕ್ರವಾರ ಉಡುಪಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಸುನಿಲ್ ಕುಮಾರ್ ಕೆಂಡಾಮAಡಲರಾಗಿದ್ದಾರೆ.
ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಉಡುಪಿ ಎಸ್ಪಿ ಹಾಗೂ ಕಾರ್ಕಳ ಶಾಸಕ ಸುನಿಲ್ ಕುಮಾರ್ ನಡುವೆ ತೀವೃ ವಾಗ್ವಾದ ನಡೆದಿದೆ. ಕೆಡಿಪಿ ಸಭೆ ಆರಂಭವಾಗುತ್ತಿದ್ದAತೆಯೇ ಶಾಸಕ ಸುನಿಲ್ ಕುಮಾರ್ ಮಾತನಾಡಿ, ಕೇವಲ ಪ್ರತಿಭಟನೆ ಮಾಡಿದ್ದಾರೆ ಎಂದ ಮಾತ್ರಕ್ಕೆ ವಾಹನಗಳ ಮಾಲಕರಿಗೆ ನೊಟೀಸ್ ಜಾರಿಗೊಳಿಸುವುದು ಎಷ್ಟು ಸರಿ? ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡುವುದೇ ತಪ್ಪಾ?ಇದೇನು ನಿರಂಕುಶ ಆಡಳಿತವೇ ಎಂದು ಉಡುಪಿ ಎಸ್ಪಿ ಡಾ.ಅರುಣ್ ಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಈ ವಿಚಾರದಲ್ಲಿ ಕಾನೂನು ಮೀರಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿರುವ ಹಿನ್ನಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ, ಅವರ ಆಕ್ಷೇಪಣೆಗಳು ಇದ್ದಲ್ಲಿ ಕೋರ್ಟಿಗೆ ಹೋಗಲಿ ಎಂದು ಎಸ್ಪಿ ತಿರುಗೇಟು ನೀಡಿದರು, ಇದಕ್ಕೆ ಸಿಟ್ಟಿಗೆದ್ದ ಸುನಿಲ್ ಕುಮಾರ್, ಕೋರ್ಟಿಗೆ ಹೋಗಲು ನೀವು ಹೇಳಬೇಕಿಲ್ಲ, ಅನ್ಯಾಯದ ವಿರುದ್ಧವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಲು ಅವಕಾಶವಿಲ್ಲವೆಂದಾದರೆ ಮನೆಯಲ್ಲಿ ಕುಳಿತು ಪ್ರತಭಟನೆ ನಡೆಸಬೇಕೇ ಎಂದು ಮರುಪ್ರಶ್ನಿಸಿದರು. ಇದಕ್ಕೆ ಜಿಲ್ಲಾಡಿತ ಸೂಕ್ತ ಉತ್ತರ ನೀಡಬೇಕೆಂದು ಬಿಗಿಪಟ್ಟು ಹಿಡಿದರು. ಇವರಿಬ್ಬರ ಜಟಾಪಟಿಯ ನಡುವೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯಪ್ರವೇಶಿಸಿ, ಪ್ರತಿಭಟನೆಗೆ ಎಲ್ಲರಿಗೂ ಹಕ್ಕಿದೆ ಅವರು ಬೀದಿಗಿಳಿದು ಪ್ರತಿಭಟನೆ ಮಾಡದೇ ಮನೆಯಲ್ಲಿ ಕುಳಿತು ಪ್ರತಿಭಟೆ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಕಟ್ಟಡ ಸಾಮಾಗ್ರಿಗಳ ಸಾಗಾಟಕ್ಕೆ ಹಠಾತ್ ನಿರ್ಬಂಧ ವಿಧಿಸಿದ ಜಿಲ್ಲಾಡಿತದ ಕ್ರಮದ ವಿರುದ್ಧ ಅಂದು ಲಾರಿ ಚಾಲಕ ಮಾಲಕರು, ಗ್ಯಾರೇಜ್ ಮಾಲಕರು, ಗಣಿ ಹಾಗೂ ಕಟ್ಟಡ ಕಾರ್ಮಿಕರು ಬೀದಿಗಿಳಿದು ಹೋರಾಟ ನಡೆಸಿದ್ದರು. ಈ ಪ್ರತಿಭಟನೆಯಲ್ಲಿ ಲಾರಿ ಮಾಲಕರು ತಮ್ಮ ಎಲ್ಲಾ ಸರಕು ಸಾಗಾಟ ವಾಹನಗಳನ್ನು ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ನಿಲ್ಲಿಸಿ ಅನಿರ್ಧಿಷ್ಟಾವಧಿ ಧರಣಿ ನಡೆಸಿದ್ದರು. ಸರ್ಕಾರ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಟ್ಟಿದ್ದರು. ಇದೀಗ ಲಾರಿ ಮಾಲಕರು ಕಾನೂನುಬಾಹಿರವಾಗಿ ವಾಹನಗಳನ್ನು ನಿಲ್ಲಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಪೊಲೀಸ್ ಇಲಾಖೆ ವಾಹನಗಳ ಮಾಲಕರಿಗೆ ನೋಟಿಸ್ ನೀಡಿರುವುನ್ನು ಖಂಡಿಸಿ ಕೆಡಿಪಿ ಸಭೆಯಲ್ಲಿ ಶಾಸಕರು ಹಾಗೂ ಎಸ್ಪಿ ನಡುವೆ ವಾಗ್ವಾದ ನಡೆಯಲು ಕಾರಣವಾಯಿತು.

















