Share this news

ಬೆಂಗಳೂರು: ರಾಜ್ಯಾದ್ಯಂತ ಕಂದಾಯ ಭೂಮಿಯಲ್ಲಿ ಅನಧಿಕೃತ ಸಾಗುವಳಿದಾರರ ಸಕ್ರಮಕ್ಕಾಗಿ 9.29 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿದ್ದು, ನಿಯಮಾನುಸಾರ ಸಮಗ್ರವಾಗಿ ಪರಿಶೀಲಿಸಿ ಅರ್ಹರಿಗೆ ಸಾಗುವಳಿ ಚೀಟಿ ನೀಡುವ ಪ್ರಕ್ರಿಯೆಯನ್ನು 8 ತಿಂಗಳೊಳಗಾಗಿ ಪೂರ್ಣಗೊಳಿಸುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ. ಅನರ್ಹರು ದೊಡ್ಡ ಸಂಖ್ಯೆಯಲ್ಲಿ ಅರ್ಜಿ ಸಲ್ಲಿಸಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸಚಿವರು ಅಂಥ ಅರ್ಜಿಗಳ ಪರಿಶೀಲನೆಗೆ ಕೆಲವು ಸೂಚನೆಗಳನ್ನು ನೀಡಿದ್ದಾರೆ. ‘ಇ-ಸಾಗುವಳಿ’ ಚೀಟಿ ವಿತರಣೆ ಜತೆಗೆ ಸರಕಾರವೇ ನೋಂದಾಯಿಸಿ, ಪೋಡಿ ಮಾಡಿ ಹೊಸ ಸಂಖ್ಯೆ ನೀಡಲು ಕ್ರಮ ವಹಿಸುವಂತೆಯೂ ಸೂಚನೆ ನೀಡಿದ್ದಾರೆ. ರಾಜ್ಯ ಸರಕಾರ ಹಾಗೂ ಸಚಿವ ಸಂಪುಟ ರಚನೆಯಾಗಿ ಆರು ತಿಂಗಳು ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿಕಂದಾಯ ಇಲಾಖೆಯಲ್ಲಿ ಕೈಗೊಂಡಿರುವ ಸುಧಾರಣಾ ಕ್ರಮಗಳ ಬಗ್ಗೆ ಕೃಷ್ಣ ಬೈರೇಗೌಡ ಅವರು ವಿಕಾಸಸೌಧದಲ್ಲಿಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಹಂಚಿಕೊಂಡರು.

‘ಭೂರಹಿತರು ಇಲ್ಲವೇ ಕಡಿಮೆ ಭೂಹಿಡುವಳಿ ಹೊಂದಿರುವ ಅನಧಿಕೃತ ಸಾಗುವಳಿದಾರರಿಗೆ ಸಕ್ರಮೀಕರಣ ಕೋರಿ 9,56,512 ಅರ್ಜಿ ಸಲ್ಲಿಕೆಯಾಗಿದ್ದು, ಆದ್ಯತೆ ಮೇರೆಗೆ ವಿಲೇವಾರಿಗೆ ಸೂಚಿಸಲಾಗಿದೆ. ಅರ್ಹರ ಜತೆಗೆ ಅನರ್ಹರೂ ಅರ್ಜಿ ಸಲ್ಲಿಸಿರುವುದು ಕಂಡುಬಂದಿದೆ. 2004ಕ್ಕೂ ಮೊದಲು ಸಾಗುವಳಿ ಮಾಡುತ್ತಿದ್ದವರು ಆ ಹೊತ್ತಿಗೆ 18 ತುಂಬಿದವರು ಅರ್ಜಿ ಸಲ್ಲಿಸಲು ಅವಕಾಶವಿತ್ತು. ಆದರೆ ಈಗ 18 ವರ್ಷ ತುಂಬಿದವರು ಅರ್ಜಿ ಹಾಕಿದ್ದಾರೆ ಎಂದು ವಿವರಿಸಿದರು.

ಈ ಹಿಂದೆ ಸಾಗುವಳಿ ಚೀಟಿ ನೀಡುವಾಗ ವಾಸ್ತವದಲ್ಲಿ ಲಭ್ಯವಿರುವ ವಿಸ್ತೀರ್ಣವನ್ನೇ ಗಮನಿಸಿಲ್ಲ. 30 ಎಕರೆ ಲಭ್ಯವಿದ್ದರೆ 45 ಎಕರೆ ಮಂಜೂರು ಮಾಡಿರುವ ಪ್ರಕರಣಗಳಿವೆ. ಇದರಿಂದ ಫಲಾನುಭವಿಗಳಿಗೆ ಪೋಡಿಯೂ ಇಲ್ಲ, ಸಾಗುವಳಿ ಚೀಟಿ ವಿತರಣೆಯಾದವರಿಗೆ ಸೂಕ್ತ ದಾಖಲೆಯೇ ಇಲ್ಲದಂತಾಗಿದೆ. ನೈಜವಾಗಿ ಸಾಗುವಳಿ ಮಾಡಿಕೊಂಡು ಬಂದವರಿಗೆ ಮಾಲೀಕತ್ವದ ಹಕ್ಕು ಸಿಗದಂತಾಗಿದೆ,ಎಂದು ಬೇಸರ ವ್ಯಕ್ತಪಡಿಸಿದರು.
ಅರ್ಜಿದಾರರ ಆಧಾರ್‌ ಸಂಖ್ಯೆ ಆಧರಿಸಿ ಕುಟುಂಬ ಸದಸ್ಯರು ಭೂಮಿ ಹೊಂದಿರುವ ಬಗ್ಗೆ ಪರಿಶೀಲಿಸಬೇಕು. 2004ಕ್ಕೂ ಮೊದಲೇ 18 ವರ್ಷ ಪೂರ್ಣಗೊಂಡಿತ್ತೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಅರ್ಜಿಯಲ್ಲಿನ ಭೂಮಿಯ ಈ ಹಿಂದಿನ ಸ್ಯಾಟಲೈಟ್‌ ಚಿತ್ರಗಳನ್ನು ಪರಿಶೀಲಿಸಿ ಸಾಗುವಳಿ ನಡೆದಿತ್ತೇ ಎಂಬುವುದನ್ನು ಪರಿಶೀಲಿಸಿ, ಇವುಗಳನ್ನೆಲ್ಲಾಬಗರ್‌ಹುಕುಂ ಸಮಿತಿ ಮುಂದಿಟ್ಟು ಪರಿಹರಿಸಲು ಸೂಚಿಸಲಾಗಿದೆ ಎಂದರು

 

 

Leave a Reply

Your email address will not be published. Required fields are marked *