Share this news

ಕಾರ್ಕಳ: ಪಡುತಿರುಪತಿ ಖ್ಯಾತಿಯ ಕಾರ್ಕಳ ಶ್ರೀ ವೆಂಕಟರಮಣ ದೇವಸ್ಥಾನದ ಕಾರ್ತಿಕ ದೀಪೋತ್ಸವವು ನಾಳೆ (ಡಿಸೆಂಬರ್ 2 ರಂದು) ನಡೆಯಲಿದೆ.
ಈಗಾಗಲೇ ದೀಪೋತ್ಸವಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ವೆಂಕಟರಮಣನ ಸನ್ನಿಧಾನವು ತಳಿರುತೋರಣ ,ವಿದ್ಯುತ್ ದೀಪಗಳಿಂದ ಅಲಂಕೃತವಾಗಿದೆ.
ಇಂದು ರಾತ್ರಿ ಕೆರೆ ದೀಪೋತ್ಸವ ನಡೆಯಲಿದ್ದು, ರಾತ್ರಿ 8 ಗಂಟೆಯಿಂದ ದೇವಳದಲ್ಲಿ ಪೂಜೆ ನಡೆದ ಬಳಿಕ ಕೆಂಪು ಗರುಡ ವಾಹನದಲ್ಲಿ ದೇವರ ಮೆರವಣಿಗೆ ಉತ್ಸವವು ಪೇಟೆಯ ಮಣ್ಣಗೋಪುರದವರೆಗೆ ಸಾಗಿ ಅಲ್ಲಿ ಪೂಜೆಗೊಂಡು ಅಲ್ಲಿಂದ ಕೆರೆಯಲ್ಲಿ ದೇವರು ದೋಣಿಯಲ್ಲಿ ವಿಹಾರ ನಡೆಸಿ ಬಳಿಕ ಕಟ್ಟೆಯಲ್ಲಿ ದೀಪೋತ್ಸವ ಪೂಜೆಯೊಂದಿಗೆ ಸಂಪನ್ನಗೊಳ್ಳಲಿದೆ.
ಡಿಸೆಂಬರ್ 2ರಂದು ಶನಿವಾರ ಲಕ್ಷದೀಪೋತ್ಸವವೂ ಅತ್ಯಂತ ವೈಭವವಾಗಿ ನಡೆಯಲಿದೆ ಬೆಳಗ್ಗೆ 9:30 ರಿಂದ ದೇವರಿಗೆ ಪೂಜೆ ತದನಂತರ ಶ್ರೀನಿವಾಸ ದೇವರನ್ನು ಹಾಗೂ ವೆಂಕಟ್ರಮಣ ದೇವರನ್ನು ಸ್ವರ್ಣ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಭುವನೇಂದ್ರ ಕಾಲೇಜು ಸಮೀಪದ ಶ್ರೀನಿವಾಸ ವನಕ್ಕೆ ಭಜನೆ ಹಾಗೂ ಮಂತ್ರಘೋಷಗಳೊಂದಿಗೆ ವೈಭವದ ಮೆರವಣಿಗೆ ಹೊರಡಲಿದೆ ದೇವರು ವನವನ್ನು ತಲುಪಿದ ಬಳಿಕ ಮಧ್ಯಾಹ್ನ 3 ಗಂಟೆಯಿಂದ ಯಿಂದ ಶ್ರೀ ದೇವರಿಗೆ ಅಭಿಷೇಕ ಆರಂಭಗೊಂಡು 5.30ರ ವೇಳೆಗೆ ಸಮಾಪ್ತಿಗೊಳ್ಳಲಿದೆ ತದನಂತರ ಸಾವಿರಾರು ಭಕ್ತರು ಪ್ರಸಾದ ರೂಪದಲ್ಲಿ ಭೋಜನ ಸ್ವೀಕರಿಸುವುದು ಇಲ್ಲಿಯ ವಿಶೇಷತೆ. ಇದನ್ನು ಇಂದಿಗೂ ವನಭೋಜನ ಎಂದು ಕರೆಯುವ ರೂಢಿ ಇದೆ.
ಬಳಿಕ ಅಲ್ಲಲ್ಲಿ ಹಾಕಲಾಗಿರುವ ಗುರ್ಜಿಗಳಲ್ಲಿ ದೇವರನ್ನು ಕುಳ್ಳಿರಿಸಿ ಪೂಜೆ ನೆರವೇರಿಸಲಾಗುತ್ತದೆ.
ಡಿಸೆಂಬರ್ 3ರಂದು ಬೆಳಗ್ಗೆ ವೆಂಕಟರಮಣ ದೇವರಿಗೆ ಪ್ರಾರ್ಥನೆ ಹಾಗೂ ಪೂಜೆ ಅಭಿಷೇಕ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿವೆ ಮಧ್ಯಾಹ್ನ 3:30 ರಿಂದ ದೇವಸ್ಥಾನದಿಂದ ಅವಭೃತ ಉತ್ಸವ ಮೆರವಣಿಗೆ ಹೊರಡಲಿದೆ. ದೇವರನ್ನು ಹೊತ್ತು ಮೆರವಣಿಗೆಯಲ್ಲಿ ಸಾಗುವಾಗ ಅಲ್ಲಲ್ಲಿ ಭಕ್ತರು ಸಿದ್ಧಪಡಿಸಿದ್ದ ಬಣ್ಣದ ನೀರನ್ನು ಮೆರವಣಿಗೆಯಲ್ಲಿ ಸಾಗುವ ಭಕ್ತರು ಮಿಂದು ಮುಂದೆ ಸಾಗುತ್ತಾರೆ. ಈ ವೇಳೆ ಸಾವಿರಾರು ಭಕ್ತರು ಶ್ರೀದೇವರ ದರ್ಶನಕ್ಕಾಗಿ ರಸ್ತೆ ಬದಿಯಲ್ಲಿ ಸಾಲುಗಟ್ಟಿ ನಿಲ್ಲುತ್ತಾರೆ ಹಾಗೂ ದೇವರಿಗೆ ಆರತಿ ಹಣ್ಣು ಕಾಯಿ ಅರ್ಪಿಸಿ ಕೃತಾರ್ಥರಾಗುತ್ತಾರೆ.

Leave a Reply

Your email address will not be published. Required fields are marked *